Wednesday 24 December 2014

Sanna kathe ...3

ಒಂದು ಹೆಣ್ಣಿನ ಭಾವನೆಗಳು ಹೀಗೂ ಇರಬಹುದೆಂದು ಕಲ್ಪಿಸಿಕೊಂಡು ಬರೆದಿದ್ದು:

ಕಿಟಕಿಯ ಕಡೆ ಮುಖ ಮಾಡಿ ಕುಳಿತವಳಿಗೆ ವಾಸ್ತವದ ಪರಿವೆಯೇ ಇರಲಿಲ್ಲ. ಮನಸ್ಸು ದೂರದಲ್ಲೆಲ್ಲೋ ಅಸ್ಪಷ್ಟವಾಗಿ ಕಾಣುತ್ತಿದ್ದ ಬೋಳು ಗುಡ್ಡದಲ್ಲಿ ನೆಟ್ಟಿತ್ತು. ಮನಸ್ಸು ಏನನ್ನೋ ಬಯಸುತ್ತಿತ್ತು. ಆದರೂ ಏನೂ ಬೇಡ ಎಂಬ ಶೂನ್ಯ ಭಾವ ಆವರಿಸಿತ್ತು. ಹಿಂದಿನದ್ದೆಲ್ಲಾ ಮರೆಯಲೇ ನಾಳೆಗಳ ಬಗ್ಗೆ ಕನಸು ಕಾಣಲೇ ಅಥವಾ ಈ ಕ್ಷಣದ ಬಗ್ಗೆ ಯೋಚಿಸಲೇ ! ಎಲ್ಲಾ ಅಸ್ಪಷ್ಟ .
ಹೌದು ಎರಡು ವರ್ಷದ ಹಿಂದೆ ಅವನು ನನ್ನ ಬಾಳಿನಲ್ಲಿ ಪ್ರವೇಶ ಪಡೆದಿದ್ದ. ಬಯಸದೆ ಬಂದ ಭಾಗ್ಯ ಎಂದೇ ನಾನು ತಿಳಿದಿದ್ದೆ. ನಾನು ಕೆಲಸಕ್ಕೆ ಹೋಗುತ್ತಿದ್ದ ಆಫೀಸಿನಲ್ಲೇ ಅವನು ಕೆಲಸಕ್ಕೆ ಸೇರಿದ್ದ. ಆತನ ಸೀಟು ನನ್ನ ಸೀಟಿನ ಪಕ್ಕಾನೇ ಇತ್ತು. ನೋಡಲು ಸುಂದರನಲ್ಲದಿದ್ದರೂ ಅವನ ಮುಗುಳ್ನಗೆ ಯಾರನ್ನಾದರೂ ಮೋಡಿ ಮಾಡುವ ಹಾಗೆ ಇತ್ತು. ಮೊದಲ ದಿನವೇ ಹಾಯ್ ಎಂದು ಕೈ ಕುಲುಕುತ್ತ ತನ್ನ ಪರಿಚಯ ಮಾಡಿಕೊಂಡಿದ್ದ. ದಿನಾ ಬೆಳಿಗ್ಗೆ ಬಂದವನೇ ಮುಂಜಾನೆಯ ಶುಭಾಶಯ ಹೇಳುತ್ತಿದ್ದ. ಊಟಕ್ಕೆ ನಾನು ಬರುವುದಿಲ್ಲ ಅಂತ ಗೊತ್ತಿದ್ದರೂ ಪ್ರತಿದಿನವೂ ತಪ್ಪದೆ ಕರೆಯುತ್ತಿದ್ದ.
ನಾನಾಯ್ತು ನನ್ನ ಕೆಲಸವಾಯ್ತು ಅಂತ ಇದ್ದ ನಾನು ಆಫೀಸಿನಲ್ಲಿ ಯಾರನ್ನು ಅಷ್ಟು ಹಚ್ಚಿಕೊಂಡಿರಲಿಲ್ಲ. ಕೇವಲ ಸಹೋದ್ಯೋಗಿ ತರಾನೆ ವರ್ತಿಸುತ್ತಿದ್ದೆ. ಎಲ್ಲರೂ ಬಿಡುವಿನ ವೇಳೆಯಲ್ಲಿ ಜೊತೆಗೂಡಿ ಹರಟೆ ಹೊಡೆಯುತ್ತಾ ಕುಳಿತಿದ್ದರೆ ನಾನು ಮಾತ್ರ ಕಂಪ್ಯೂಟರಿನ ಮುಂದೆಯೋ ಇಲ್ಲವೇ ಯಾವುದಾದರು ಕಾದಂಬರಿಯನ್ನೊ ಓದುತ್ತ ಕುಳಿತಿರುತ್ತಿದ್ದೆ. ಪಕ್ಕದಲ್ಲೇ ಕುಳಿತಿರುತ್ತಿದ್ದ ಅವನು ಏನಾದರು ಕೇಳಿದರೆ ,ಕೇಳಿದ್ದಕ್ಕಷ್ಟೇ ಉತ್ತರಿಸಿ ಸುಮ್ಮನಾಗುತ್ತಿದ್ದೆ. ಯಾವತ್ತೂ ನಾನಾಗಿಯೇ ಏನನ್ನು ಅವನ ಬಳಿ ಕೇಳಿರಲಿಲ್ಲ. ಕೇಳುವಂತಹ ಸನ್ನಿವೇಶವು ಬಂದಿರಲಿಲ್ಲ. ನಮ್ಮಿಬ್ಬರ ನಡುವೆ ಹೇಳುವಂತಹ ಪರಿಚಯವೂ ಇರಲ್ಲಿಲ್ಲ. ಸ್ನೇಹವೂ ಇರಲ್ಲಿಲ್ಲ. ಹೀಗೆ ದಿನಗಳು ಸಾಗುತ್ತಿದ್ದವು. ನನಗೆ ಅರಿವಿಲ್ಲದಂತೆ ಅವನ ಬಗ್ಗೆ ಯೋಚಿಸಲು ಶುರುಮಾಡಿದ್ದೆ. ಅದಕ್ಕೆ ಕಾರಣಗಳು ಇರಲಿಲ್ಲ. ಆದರೂ ಜೀವನದಲ್ಲಿ ಮೊದಲ ಬಾರಿಗೆ ಒಬ್ಬ ಹುಡುಗನ ಬಗೆಗೆ ಯೋಚಿಸಿದ್ದೆ. ಯಾಕೆ ಅಂತ ನನ್ನನ್ನೇ ನಾನು ಪ್ರಶ್ನಿಸಿಕೊಂಡರೆ. ಅದಕ್ಕೆ ಉತ್ತರ ನನ್ನ ಬಳಿ ಇರಲಿಲ್ಲ.
ವಯಸ್ಸು 28 ದಾಟಿತ್ತು. ಹದಿಹರೆಯದಲ್ಲೂ ಎಂದೂ ಈ ರೀತಿ ಭಾವನೆಗಳು ಬಂದಿರಲಿಲ್ಲ. ನನ್ನ ಸ್ನೇಹಿತೆಯರು ಅವರ ಗೆಳೆಯರ ಬಗ್ಗೆ ಹೇಳುವಾಗಾಗಲಿ , ಅವರನ್ನ ನೋಡಿದಾಗಾಗಲಿ ನಾನೆಂದು ನನಗೊಬ್ಬ ಗೆಳೆಯ ಬೇಕು ಎಂದು ಎಣಿಸಿರಲಿಲ್ಲ. ನಾನಾಯ್ತು ನನ್ನ ಕೆಲಸವಾಯ್ತು , ನನ್ನ ಓದಾಯ್ತು. ಎಂದೂ ನಾನೊಬ್ಬಳು ಒಂಟಿ ಎಂಬ ಭಾವನೆ ಬಂದಿರಲೇ ಇಲ್ಲ. ಮನಸ್ಸು ಜಡವಾಗಿತ್ತೋ ಅಥವಾ ಹುಟ್ಟಿ ಬೆಳೆದ ವಾತಾವರಣ ನನ್ನನ್ನು ಜಡತೆಯೆಡೆಗೆ ನೂಕಿತ್ತೋ ಗೊತ್ತಿಲ್ಲ.
ಅವನು ನನ್ನ ಜೊತೆಗೆ ಕೆಲಸ ಮಾಡುತ್ತ ಎರಡು ವರ್ಷವೇ ಕಳೆದಿದೆ. ನಾನೆಂದೂ ನನ್ನ ಭಾವನೆಗಳನ್ನ ಅವನ ಬಳಿ ಹೇಳಿಕೊಳ್ಳಲೇ ಇಲ್ಲ. ಬೇರೆ ಯಾರ ಜೊತೆಯೂ ಕೂಡ.
ನಿನ್ನೆ ಅವನು ಖುಷಿಯಿಂದ ಎಲ್ಲರಿಗೂ ಸಿಹಿ ಹಂಚಿ ತನಗೆ ಮದುವೆ ನಿಶ್ಚಯವಾಗಿದೆ ಅಂದಾಗ , ಅಭಿನಂದನೆ ತಿಳಿಸಬೇಕೋ ಅಥವಾ ನನ್ನ ಭಾವನೆಗಳನ್ನ ಅವನ ಮುಂದೆ ಹೇಳಬೇಕೋ ತಿಳಿಯದೆ ಕೇವಲ ಥ್ಯಾಂಕ್ಸ್ ಮಾತ್ರ ಹೇಳಿದ್ದೆ. ಅವನು ಕೊಟ್ಟ ಸಿಹಿಯನ್ನೂ ತಿನ್ನದೇ ಹಾಗೆ ಮೇಜಿನ ಮೇಲಿಟ್ಟು ಕೆಲಸ ಮುಗಿಸಿ ಸುಮ್ಮನೇ ಮನೆಗೆ ಬಂದಿದ್ದೆ ಎಂದಿನಂತೆ.
ಈಗ ಬೆಳಿಗ್ಗೆ ಎದ್ದಾಗಿನಿಂದ ಏನನ್ನೋ ಕಳೆದುಕೊಳ್ಳುತ್ತಿರುವ ಅನುಭವ. ಏನು..!! ಗೊತ್ತಿಲ್ಲ...
ಗಡಿಯಾರ ತನ್ನ ಪಾಡಿಗೆ ತಾನು ಓಡುತ್ತಿದೆ. ಆಫೀಸಿಗೆ ತಡವಾಗುವ ಅರಿವಾಗಿ ಕುಳಿತಲ್ಲಿಂದ ಮೇಲೆದ್ದೆ ...............

ಬರೆದವರು: ಸತ್ಯ..,

No comments:

Post a Comment