Monday 23 December 2013

ನನ್ನ ಬಾಲ್ಯದ ದಿನಗಳ ಮೇಲೆ ಒಂದು ಇಣುಕು ನೋಟ::

ಎಷ್ಟು ವಿಚಿತ್ರ ಅಲ್ವಾ ಈ ಜೇವನ ಅನ್ನೋದು. ನಾವು ಏನೇನೋ ಅನ್ಕೊಂಡಿರ್ತೀವಿ ಆದ್ರೆ ಹೆಚ್ಚಿನ ಸಲ ಏನೇನೋ ಆಗಿ ಹೋಗಿರತ್ತೆ. ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಎಲ್ಲೋ ಬಂದು ಸೇರ್ಕೊತೀವಿ. ನನ್ನ ಹಾಗೆ ಹಳ್ಳಿಲಿ ಹುಟ್ಟಿ - ಬೆಳೆದೋರ ಪ್ರಪಂಚನೇ ಬೇರೆ.  LKG-UKG abcd ಗೊಡವೆ ಇಲ್ಲದೆ, ಅಂಗನವಾಡಿ -ಬಾಲವಾಡಿಗೆ ಉಪ್ಪಿಟ್ಟು ಹಾಲು ತಿನ್ನೋಕೆ ಅಂತಾನೆ ಹೋಗ್ತಿದ್ದ ಕಾಲ ಅದು. ಈಗಿನ ಹಾಗೆ ಯಾವುದೇ ಆಧುನಿಕ ಆಟದ ಸಾಮಾನುಗಳ ಪರಿವೆ ಇಲ್ಲದ ನಮಗೆ ಅಲ್ಲೇ ಸಿಗುತ್ತಿದ್ದ ಕಲ್ಲು -ಮಣ್ಣು, ಎಲೆ ,ಹೂವು , ಗೆರಟೆ ಚಿಪ್ಪು, ಬೆಂಕಿಪೊಟ್ಟಣದ ಖಾಲಿ ಡಬ್ಬಿಗಳೇ ಆಟದ ವಸ್ತುಗಳು.
ಕೆಲವೊಮ್ಮೆ ಅದಕ್ಕಾಗಿ ಕಿತ್ತಾಟ ಬೇರೆ. ಪ್ರತಿದಿನ ಶಾಲೆ ಬಿಟ್ಟು ಬರುವಾಗ ಎಲ್ಲಾ ಅಂಗಡಿ ಬದಿಯ ಚರಂಡಿಯಲ್ಲಿ ಖಾಲಿ ಬೆಂಕಿಪೊಟ್ಟಕ್ಕಾಗಿ ಹುಡುಕಾಟ. ( ಅದರಿಂದ 'ಬಚ್ಚೆ' ಎಂದು ಕರೆಯುತ್ತಿದ್ದ ಆಟ ಆಡುತ್ತಿದ್ದೆವು ).
ಚಡ್ಡಿ ಜೇಬಿಗೆ ಕೈ ಹಾಕಿದರೆ ಸಿಕ್ಕುತ್ತಿದ್ದದ್ದೆ ಅವುಗಳು. ಅದನ್ನ ಬಿಟ್ಟರೆ ನಮ್ಮ ಅಕ್ಕನ ಓರಗೆಯವರ ಜೊತೆ ಕುಂಟೆ ಬಿಲ್ಲೆ ಆಟ. ಮೊದಲ ಎರಡು ಮೂರು ಸುತ್ತೇನೋ ಸುಲಭದಲ್ಲಿ ಆಡುತ್ತಿದ್ದೆವು . ನಂತರದ ಕೈ ಮೇಲೆ, ಕಾಲ ಮೇಲೆ, ತಲೆ ಮೇಲೆ ಇಟ್ಕೊಂಡು ಕುಂಟುವ ಸುತ್ತಿನಲ್ಲಿ ಎಷ್ಟೇ ಪ್ರಯತ್ನಪಟ್ಟರೂ ಎರಡು ಮೂರು ಹೆಜ್ಜೆ ಹೋಗುವುದರಲ್ಲಿ ಕಲ್ಲು ಕೆಳೆಗೆ ಬೀಳುತ್ತಿತ್ತು.
ಸ್ವಲ್ಪ ಬೆಳೆದನಂತರ ಮುಂದುವರೆದ ಆಟಗಳು ಶುರು, ಚಿನ್ನಿದಾಂಡು, ಗೋಲಿ , ಲಗೋರಿ, etc. ಮನೆಯ ಮೂಲೆಯಲ್ಲಿ ಒಂದು ಚಿನ್ನಿ-ದಾಂಡು ಕೋಲು ಇರಲೇಬೇಕು. ಜೇಬಿನ ತುಂಬಾ ಗೋಲಿಗಳು. ಮನೆಯಿಂದ ಚಾಕೊಲೇಟ್ಗೆ ಅಂತ ಇಸ್ಕೊಂಡು ಬರ್ತಿದ್ದ ಒಂದೆರಡು ರೂಪಾಯಿಗಳು ಗೋಲಿಗೋಸ್ಕರ ಅಂಗಡಿಯ ಪಾಲು , ಇಲ್ಲಾ ಗೆದ್ದವನ ಪಾಲು. (ಗೆದ್ದವನ ಹತ್ತಿರ ಗೋಲಿ ತಗೋಳ್ತಾ ಇದ್ವಿ- ಅಂಗಡಿಗಿಂತ ಒಂದೆರಡು ಗೋಲಿ ಜಾಸ್ತಿನೇ ಸಿಗ್ತಿದ್ವು ಅಂತ :) ).

ಮಳೆಗಾಲದಲ್ಲಿ ಬಯಲ ಕೆಸರಿನಲ್ಲಿ ಹುಗಿಯೋ ಆಟ ಬಲು ಇಷ್ಟದ ಆಟಗಳಲ್ಲೊಂದು. ಮಲೆನಾಡು ಆಗಿದ್ದರಿಂದ ಮನೆಯ ಹಿಂದಿನ ತೋಡಿನಲ್ಲಿ ಮೀನು ಹಿಡಿಯುವ ಖಯಾಲಿ. ಎಂತ ಮಳೆ  ಬರುತ್ತಿದ್ದರು ಯಾವ ಪರಿವೆ ಇಲ್ಲದೆ ನಮ್ಮ ಆಟ ಸಾಗುತ್ತಿತ್ತು. ನೆಗಡಿ, allergy ಅನ್ನೋ ಮಾತುಗಳೇ ಇರ್ತಿರ್ಲಿಲ್ಲ. ನಾನು ಸಣ್ಣವನಾಗಿದ್ದರಿಂದ ಮೀನಿನ ಮರಿಗೂ, ಗೊದಮೊಟ್ಟೆಗೂ (tadpole) ವ್ಯತ್ಯಾಸ ತಿಳಿಯುತ್ತಿರಲಿಲ್ಲ. ಅದನ್ನೇ ಮೀನಿನ ಮರಿ ಎಂದು ಖಾಲಿಯಾದ amrutanjan ಇಲ್ಲಾ  zandu balm ಬಾಟಲಿಗೆ ಹಾಕಿ ಮನೆಗೆ ತಂದು ಕಿಟಕಿ ಮೇಲೆ ಇಡುತ್ತಿದ್ದೆ ( ಆಗ ನನಗೆ ಅದೇ ಅಕ್ವೇರಿಯಂ ತರ). ಬೆಳಿಗ್ಗೆ ಎದ್ದು ನೋಡಿದಾಗ ಎಲ್ಲಾ ಗೊದಮೊಟ್ಟೆಗಳು ಶಿವನ ಪಾದ ಸೇರಿರ್ತಿದ್ವು. ನಂತರ ಅದನ್ನ ಎಲ್ಲಿಂದ ತರುತಿದ್ದೇನೋ ಅಲ್ಲೇ ಬಿಸಾಕಿ ಮತ್ತೆ ಬೇರೆ tadpole ಗಳನ್ನ ಬಾಟಲಿಗೆ ತುಂಬಿಸಿಕೊಂಡು ಬರುತ್ತಿದ್ದೆ.

ಮುಂದೆ ಅಂಗಡಿಯಲ್ಲಿ chewing gum ಜೊತೆಗೆ ಕ್ರಿಕೆಟರ್ ಕಾರ್ಡ್ಸ್ ಬರಲು ಶುರುವಾಯ್ತು. ನಮ್ಮ ಪಾಕೆಟ್ money investment ಎಲ್ಲಾ ಈಗ ಕಾರ್ಡ್ಸ್ ಮೇಲೆ. ಅದರಲ್ಲೂ ಸಚಿನ್ ಕಾರ್ಡ್ ಗಾಗಿ ಎಲ್ಲಿಲ್ಲದ ಬೇಡಿಕೆ. ದಿನ ಅಂಗಡಿಗೆ ಹೋಗೋದು ಹೊಸ chewing gum ಬಾಕ್ಸ್ ಬಂದಿದೆಯ ಅಂತ ನೋಡೋದೇ ಕೆಲಸ.
ನಂತರ ನಮ್ಮ ಆಕರ್ಷಣೆಗಳು ಹೊಸ ಜಗತ್ತಿನ ಕಡೆ ಮುಖ ಮಾಡಿದವು. ಕ್ರಿಕೆಟ್ ಎಲ್ಲರ ಮೆಚ್ಚಿನ ಆಟವಾದ ನಂತರ ಉಳಿದ ಎಲ್ಲಾ ಆಟಗಳಿಗೂ ತಿಲಾಂಜಲಿ. ನಮ್ಮ ಮನೆ ಮುಂದೆ ಇದ್ದ ಹಳೇ ಪೋಲಿಸ್ ಸ್ಟೇಷನ್ ಹಿಂದಿನ ಸಣ್ಣ ಉಬ್ಬು -ತಗ್ಗುಗಳ ಜಾಗವೇ ನಮಗೆ 'ಚಿನ್ನಸ್ವಾಮಿ ಸ್ಟೇಡಿಯಂ'.ಅಲ್ಲಿ ಯಾರೋ ಗೋಡೆಯ ಮೇಲೆ ಮಸಿಯಿಂದ ಆ ಹೆಸರನ್ನು ಬರೆದಿದ್ದರು. ಊರಲ್ಲಿ ಎರಡು ದೊಡ್ಡ ಮೈದಾನಗಳಿದ್ದರೂ, 'ಚಿನ್ನಸ್ವಾಮಿ ಸ್ಟೇಡಿಯಂ'ಮೆ ನಮಗೆ hot favt. ಅಲ್ಲಿದ್ದ ಹಲಸಿನ ಮರದಡಿಯ ನೆರಳಿನಲ್ಲಿ ಬೆಳಿಗ್ಗೆಯಿಂದ ರಾತ್ರಿಯ ತನಕ ನಮ್ಮ ಮ್ಯಾಚ್ ಸಾಗುತ್ತಲೇ ಇರುತ್ತಿತ್ತು. ಮನೆಯಿಂದ ಊಟದ, ಚಹಾದ ಕರೆ ಬಂದಾಗ ಮಾತ್ರ ಮನೆಯ ನೆನಪು.
ಮುಂದೆ High School ಜೀವನ ..... ಅಲ್ಲಿಂದ ಉಳಿದೆಲ್ಲಾ ಹುಡುಗಾಟಕ್ಕೂ ಸ್ವಲ್ಪ brake ಬಿತ್ತು. ..............


Tuesday 3 December 2013

ಲೂಸಿಯಾ ಹಾಡು ನನ್ನ ಪದಗಳೊಳಗೆ::

"ನಾನು ನಿನ್ನೊಳಗೊ , ನೀನು ನನ್ನಳಗೊ , ನಾವಿಬ್ಬರೂ ಈ ಪ್ರೇಮದೊಳಗೋ,
ಆಸೆ ಕನಸೊಳಗೊ, ಕನಸು ಆಸೆಯೊಳಗೊ, ಆಸೆ ಕನಸುಗಳೆರಡೂ ಕಾಣದ ಕಲ್ಪನೆಯೊಳಗೋ,
ಮೌನ ಮಾತೊಳಗೊ, ಮಾತು ಮೌನದೊಳಗೊ, ಮೌನ ಮಾತುಗಳೆರಡೂ ಮನದ ಭಾವನೆಯೊಳಗೋ,
ಉಸಿರು ಗಾಳಿಯೊಳಗೊ, ಗಾಳಿ ಉಸಿರೊಳಗೊ , ಉಸಿರು ಗಾಳಿಗಳೆರಡೂ ಆತ್ಮದೊಳಗೋ.,
ಹುಟ್ಟು ಸಾವೊಳಗೋ , ಸಾವು ಹುಟ್ಟೊಳಗೋ, ಹುಟ್ಟು ಸಾವುಗಳೆರಡೂ ಭಗವಂತನ ಇಚ್ಛೆಯೊಳಗೋ,
ದೇಹ ಮಣ್ಣೊಳಗೊ, ಮಣ್ಣು ದೇಹದೊಳಗೋ, ದೇಹ ಮಣ್ಣುಗಳೆರಡೂ ಕಟ್ಟೋ- ಗೋರಿಯೋಳಗೋ..,"
ಸತ್ಯ..,
--------------------------------------------------------------------------------------------------------

ಬದಲಾಗದ ನಿಯಮ::

ಮಳೆಯ ಜೊತೆಗಿನ ಪಯಣ,
ತುಂತುರು ಹನಿಗಳ ಸಿಂಚನ,

ಹಕ್ಕಿಗಳ ಇಂಪಾದ ಕಲರವ,
ಧುಮ್ಮಿಕ್ಕುವ ಜಲಪಾತಗಳ ಅಬ್ಬರ,

ಜುಳುಜುಳು ಹರಿವ ತೊರೆಗಳ ನಿನಾದ,
ಯಾರಿಗೂ ಅರ್ಥವಾಗದ ಮೂಕ ಪ್ರಾಣಿಗಳ ಸಂವಾದ,

ಹಚ್ಹ ಹಸಿರಿನ ಸೊಬಗು ನೀಡುತ್ತಿರೆ ಮನಕೆ ಮುದ,
ಆಹಾ ಅದ ಸವಿಯಲು ಎಂತ ಆಹ್ಲಾದ,

ಚಂದ್ರನನ್ನೇ ಮುಟ್ಟುತ್ತೇವೆಂಬ ಮರಗಳ ಹಂಬಲ,
ಜಗದ ಜಂಜಾಟ ಬೇಡೆಂದು ದೂರ ನಿಂತ ಸಾಲು ಗಿರಿ ಶಿಖರ,

ಮದುವಣಗಿತ್ತಿಯನ್ನೂ ಮೀರಿಸುವ ಸಿಂಗಾರ,
ತರುಲತೆಗಳು ಮರವ ಬಳಸಿರುವಂತೆ ಶೃಂಗಾರ,

ಹೊಸ ಚಿಗುರು ಬಂದಾಗ ಎಲ್ಲೆಲ್ಲೂ ಹಬ್ಬದ ವಾತಾವರಣ,
ಶರತ್ಕಾಲ ಬಂತೆಂದರೆ ಅದೇ ಸ್ಮಶಾನ ಮೌನ,

ಸೃಷ್ಟಿಯ ಹುಟ್ಟಿಗೆ ಇದೆ ತಾನೇ ಕಾರಣ,
ಬದಲಾವಣೆಯೇ ಈ ಜಗದ ಬದಲಾಗದ ನಿಯಮ......,

ಸತ್ಯ

------