Monday 17 February 2014

"ಕಾಲ ಮತ್ತು ಕನಸು" ನನ್ನ ಮಾತುಗಳಲ್ಲಿ...,



                         ಕಾಲ ಅನ್ನೋದು ಎಷ್ಟು ವಿಚಿತ್ರ ಅಲ್ವಾ. ಅದಕ್ಕೇ ಕಾಲವನ್ನು ತಡೆಯೋರು ಯಾರು ಇಲ್ಲ- ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ ಅನ್ನೋ ಹಾಡೇ ಸಾಕ್ಷಿ. ಹೌದು ನಾವು ಸುಮ್ನೆ ಕೂತರೂ, ಗಡಿಯಾರದ ಮುಳ್ಳು ತಿರುಗೋದು ನಿಂತರೂ ಸಮಯ ಮಾತ್ರ ಲಗಾಮಿಲ್ಲದ ಕುದುರೆಯಂತೆ ಓಡುತ್ತಲೇ ಇರುತ್ತದೆ. ನಾವು ಬೇಕಾದರೆ ನಮ್ಮ ಕೆಲಸವನ್ನು ನಾಳೆಗೆ ಮುಂದೂಡಬಹುದು ಆದರೆ ತಿರುಗೋ ಭೂಮಿ, ಭಾನು ಮಾತ್ರ ನಿತ್ಯ ನಿರಂತರ ತನ್ನ ಕಾಯಕವನ್ನು ಮಾಡುತ್ತಲೇ ಇರುತ್ತದೆ.

ಈ- ಕಾಲಕ್ಕೂ , ಕನಸಿಗೂ ಏನೋ ನಂಟು ಇದೆ ಅಂತ ಅನ್ಸಲ್ವಾ..!! . ನಾಳೆ ಏನು ಅಂತ ಗೊತ್ತಿಲ್ಲಾ ಅಂದ್ರು ಕನಸುಗಳನ್ನ  ಕಾಣೋದು ಮಾತ್ರ ನಿಲ್ಲಿಸೋಕೆ ಆಗಲ್ಲ ಅಲ್ವಾ..?!! ನಾವೇ ಈ ಭೂಮಿ ಮೇಲೆ ಹುಟ್ಟುತ್ತೀವಿ ಅಂತ ಯಾರಿಗೂ ಗೊತ್ತಿರಲ್ಲ. ಯಾರ್ ಹೊಟ್ಟೇಲಿ ಹುಟ್ಟುತ್ತೀವಿ ಅಂತಾನು ಗೊತ್ತಿರಲ್ಲ. ಯಾವಾಗ ಸಾಯ್ತಿವಿ ಅಂತಾನು ಗೊತ್ತಾಗಲ್ಲ. ಆದರೆ ಹುಟ್ಟಿ ಬೆಳಿತಾ ಬೆಳಿತಾ ಹೋದಂಗೆಲ್ಲ ಈ ಕಾಲದ ಜೊತೆ ಕನಸುಗಳು ಬೆಳಿತಾ ಹೋಗುತ್ತದೆ. ಸಣ್ಣವರಿದ್ದಾಗ ಯಾರೋ ಹಿಡ್ಕಂಡಿರೋ ತಿಂಡಿನೋ , ಆಟದ ಸಾಮಾನುಗಳು ನಮ್ಮತ್ರಾನು ಇದ್ರೆ...!! ಅನ್ನೋ ಕನಸು. ಮನೆಯಲ್ಲಿ ಕೊಡ್ಸೋ ಸೌಲಭ್ಯ ಇದ್ರೆ ಅದು ಒಂದು ಆಸೆ ಅಷ್ಟೇ. ಅದೇ ಕೊಡ್ಸೋಕೆ ಆಗಲ್ಲಾ ಅಂದ್ರೆ ಅದೂ ಕೂಡ ಒಂದು ಕನಸೇ ಅಂತ ಹೇಳಬಹುದು.

ಇನ್ನು ಶಾಲೆ ಮೆಟ್ಟಿಲು ಹತ್ತಿದ ಮೇಲೆ ಸ್ನೇಹಿತರು ಹಾಕೋ ತರ ಬಟ್ಟೆ ಹಾಕೋಬೇಕು, ಅದೇ ತರದ ಬ್ಯಾಗ್ ಬೇಕು, ಶೂಸ್ ಬೇಕು, ಬುಕ್ ಬೇಕು, ಎಕ್ಸ್ಟ್ರಾ ಕ್ಲಾಸ್ ಗೆ ಸೇರ್ಕೊಬೇಕು, ಸೈಕಲ್ ಬೇಕು ಇನ್ನೂ ಏನೇನೋ
ಮುಗಿಯದ ಬಯಕೆಗಳು. ಎಷ್ಟೋ ಜನರ ಜೀವನದಲ್ಲಿ ಇವೆಲ್ಲಾ ಇನ್ನು ಕನಸುಗಳಾಗೆ ಉಳಿದಿವೆ. ಎಷ್ಟೋ ಅಪ್ಪ ಅಮ್ಮಂದಿರು ತಮ್ಮ ಕನಸುಗಳು ನನಸಾಗದಿದ್ದರೂ ತಮ್ಮ ಮಕ್ಕಳ ಕನಸಾದರೂ ನನಸಾಗಲಿ ಅಂತ ಹಗಲಿರುಳು ದುಡಿಯೋದು ಅದಕ್ಕೆ ಅಲ್ವೇ..!! ಎಷ್ಟೇ ಇದ್ರು ಆಸೆಗಳಿಗೇನು ಬರವೇ..?? ಒಂದು ಕೊಡ್ಸಿದ್ರೆ ಮತ್ತೊಂದು ಬೇಕು ಅನ್ನೋದಂತು ಯಾರೂ ಬಿಡಲ್ಲ. ಅದು ಸಿಗ್ಲಿಲ್ಲ ಅಂದಾಗ ಅದು ಕೂಡ ಈಡೇರದ ಕನಸುಗಳ ಗುಂಪಿಗೆ ಸೇರ್ಪಡೆ.

ನಿಜವಾದ ಕನಸುಗಳ ಕಟ್ಟೆ ಒಡೆಯುವುದು ಈಗಲೇ. ಅದೇ ಕಾಲೇಜ್ ಮೆಟ್ಟಿಲು ಏರಿದಾಗ. ಅಲ್ಲಿವರೆಗೂ ಇರದ ಜವಾಬ್ದಾರಿ ಈಗ ತನ್ನಿಂದ ತಾನೇ ಬರುತ್ತದೆ. ಪ್ರತಿಯೊಬ್ಬರೂ ಕನಸುಗಳ ಅರಮನೆ ಕಟ್ಟೋದೇ ಈಗ.
ಮುಂದೆ ಏನು ಓದಬೇಕು, ಏನೆಲ್ಲಾ ಸಾಧನೆ ಮಾಡಬೇಕು, ಫ್ಯಾಮಿಲಿ ನ ಹೇಗೆ ನೋಡ್ಕೋಬೇಕು, ಮನೆ ಕಟ್ಬೇಕು, ಹೆಸರು ಮಾಡಬೇಕು, ಹೆಚ್ಚು ಹೆಚ್ಚು ದುಡ್ಡು ಸಂಪಾದನೆ ಮಾಡಬೇಕು.etc.....
ಇನ್ನು ಪ್ರೀತಿ ಪ್ರೇಮ ಅನ್ನೋದು ಶುರುವಾದರಂತೂ ಕೇಳೋದೇ ಬೇಡ. ಸ್ವರ್ಗವನ್ನೇ ಭೂಮಿಗೆ ತಂದಿಟ್ಟು ಬಿಡ್ತಾರೆ. ಹೆಚ್ಚಿನವರು ಕ್ಷಣಿಕದ ಸ್ವರ್ಗದ ಆಸೆಯಿಂದಾಗಿ .ಭವಿಷ್ಯದ ಕನಸನ್ನೆಲ್ಲಾ ಹಾಳು ಮಾಡ್ಕೊಂಡಿರೋದನ್ನ ನೋಡೇ ಇರ್ತೀವಿ . ಆ ವಿಚಾರ ಆ ಕಡೆ ಇರಲಿ ಬಿಡಿ.

ಇನ್ನು ಕಾಲೇಜ್ ಲೈಫ್ ಎಂಬ ಸಣ್ಣ ಅವಧಿಯ ಕಾಲ ಹೇಗೆ ಮುಗ್ದು ಹೋಗತ್ತೋ ಆ ದೇವರೇ ಬಲ್ಲ. ಎಲ್ಲರಿಗೂ ಇದರ ಅನುಭವ ಅಂತು ಇದ್ದೇ ಇದೆ..!! ಏನು ಎತ್ತ ಅನ್ನುವಾಗಲೇ ಜೀವನವೆಂಬ ಮಹಾಸಾಗರಕ್ಕೆ ಎಂಟ್ರಿ ಕೊಟ್ಟಿರ್ತೀವಿ. ಹೆಚ್ಚಿನ ಹುಡುಗಿಯರು ಮದುವೆ (ಎಂಬ ಅತ್ಯಾಚಾರ) ಮಾಡ್ಕೊಂಡು ಕಂಡ ಕನಸುಗಳನ್ನೆಲ್ಲಾ ಅಗ್ನಿ ಕುಂಡದ ಸುತ್ತ ಸುತ್ತುತ್ತಾ ಸುಟ್ಟು ಬಿಡ್ತಾರೆ. (ಈಗ ಕಾಲ ಬದಲಾಗಿದೆ -ಮದ್ವೆ ಆದಮೇಲೂ ನಾರ್ಮಲ್ ಲೈಫ್ ನಡ್ಸೋರು ಇದಾರೆ). ಇನ್ನು ಹುಡುಗ್ರು ಫ್ಯಾಮಿಲಿ , ರೆಸ್ಪಾನ್ಸಿಬಿಲಿಟಿ , ಅನಿವಾರ್ಯತೆಯ ಕಟ್ಟುಪಾಡಿಗೆ ಒಳಗಾಗಿ, ಕನಸುಗಳನ್ನೆಲ್ಲಾ ಮೂಟೆ ಕಟ್ಟಿ ,ಹಣ ಗಳಿಸುವುದೊಂದೇ ತಮ್ಮ ಕನಸನ್ನಾಗಿ ಮಾಡಿಕೊಂಡು ಬಿಡ್ತಾರೆ (ಒಂದೊಂದ್ಸಲ ಕಾಲಾನೆ ಈ ರೀತಿ ಬದಲಾಯಿಸಿ ಬಿಡುತ್ತದೆ).

ಇವೆಲ್ಲದರ ನಡುವೆ ಕೆಲವು ಮರೆಯಲಾಗದ ಕನಸುಗಳು ಎಲ್ಲರ ಮನಸಲ್ಲೂ ಇರುತ್ತದೆ. ಈಗ ಅವಕಾಶ ಸಿಕ್ಕರೂ ಅದನ್ನ ನನಸಾಗಿಸಲು ತುದಿಗಾಲಲ್ಲಿ ನಿಂತಿರ್ತಾರೆ. ಎಲ್ಲೋ ವೇದಿಕೆ ಮೇಲೆ ಹಾಡೋ ಆಸೇನೋ, ನಾಲ್ಕು ಜನರ ಮುಂದೆ ಕುಣಿಯೋ ಹುಚ್ಚೋ, ಸಿನಿಮಾದಲ್ಲಿ ನಟಿಸುವ ಆಸೇನೋ, ನೆಚ್ಚಿನ ನಟ ನಟಿ , ಕ್ರೀಡಾಪಟುವಿನ ಜೊತೆ ಡಿನ್ನರ್ ಆಸೇನೋ, ಅವರನ್ನ ವರಿಸುವ ಆಸೇನೋ, ಯಾವುದೊ ಹುಡುಗ ಹುಡ್ಗಿನ ಮನಸಾರೆ ಮೆಚ್ಚಿಕೊಂಡು ಈಗಲೂ ಅವರಿಗಾಗಿ ಬಯಸುವ ಮನ, ಹೇಗೆ ಇನ್ನೂ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದ್ರೆ ಅವೆಲ್ಲಾ ನನಸಾಗೋದಿಲ್ಲ ಅಂತ ಗೊತ್ತಿದ್ದರೂ ಕನಸುಗಳು ಮಾತ್ರ ಜೀವಂತ......

ಅಲ್ವಾ...??!!!

Wednesday 12 February 2014

My Autograph...............!!



            ಅದೇನೋ ಕಂಡ್ರಿ ಮೈ ಆಟೋಗ್ರಾಫ್ ಫಿಲಂ ಅಂದ್ರೆ ನಂಗೆ ತುಂಬಾ ಇಷ್ಟ . ಅದು ನಮ್ಮೂರು (ತೀರ್ಥಹಳ್ಳಿ) ಸುತ್ತಮುತ್ತ ತೆಗೆದದ್ದು ಅಂತಾನೋ, ಇಲ್ಲ ಅದರಲ್ಲಿ ಇರೋ ಹಳ್ಳಿ ಸೊಗಡು, ಭಾವನಾತ್ಮಕ ಕಥೆ, ಎಲ್ಲೂ ಅಶ್ಲೀಲ , ಆಡಂಬರದ ಅಡರು ತೊಡರುಗಳಿಲ್ಲದೆ ಸಾಗುವ ಕಥಾ ಹಂದರವೋ  ಗೊತ್ತಿಲ್ಲ. ಒಟ್ಟಿನಲ್ಲಿ ಹತ್ತಕ್ಕೂ ಹೆಚ್ಚು ಬಾರಿ ನೋಡಿದ ಏಕೈಕ ಚಿತ್ರ. ಇನ್ನೂ ಹತ್ತು ಸಾರಿ ನೋಡಿದರೂ ಬೇಜಾರು ಬರಲ್ಲಾ ನಂಗೆ.

ಇವೆಲ್ಲಾ ಯಾಕೆ ಕೊರಿತಾ ಇದೀನಿ ಅಂತ ಅನ್ನಿಸ್ತ ಇದ್ಯ. ನಾನೀಗ ಹೇಳ ಹೊರಟಿರುವುದು ಕೇವಲ ಆ ಚಿತ್ರದ ತಲೆಬರಹದ ಕುರಿತು . ಅದೇ ಆಟೋಗ್ರಾಫ್ ನ ಕುರಿತು. ಹೌದು ಎಲ್ರು ನಿಮ್ ಹಳೇ ಬ್ಯಾಗೋ , ಸೂಟ್ಕೇಸೋ ತೆಗೆದರೆ ಅದ್ರಲ್ಲಿ ಭದ್ರವಾಗಿ ಕುತಿರೋ ಒಂದೇ ಒಂದು ಪುಸ್ತಕ ಅಂದ್ರೆ ಅದು ಆಟೋಗ್ರಾಫ್ ಬುಕ್. ಎಲ್ರು ಒಂದಲ್ಲ ಒಂದ್ಸಲ ಆಟೋಗ್ರಾಫ್ ಅನ್ನು ಬರ್ಸ್ಕೊಂಡೆ ಇರ್ತೀವಿ. ನಾನಂತೂ 7ನೇ ತರಗತಿಲಿ, 10ನೇ ತರಗತಿಲಿ , PUನಲ್ಲಿ and ಇಂಜಿನಿಯರಿಂಗ್ ಫೈನಲ್ ಇಯರ್ ನಲ್ಲಿ ಒಂದೊಂದ್ಸಲ ಬರ್ಸಿದಿನಿ. 7ನೇ ತರಗತಿಲಿ ಒಂದು ಸಣ್ಣ ಫೋನ್ ನಂಬರ್ ಬರಿಯೋ ಬುಕ್ ನಲ್ಲಿ ಬರ್ಸಿದ್ದೆ ( ಆಗೆಲ್ಲಾ ಸ್ಲಾಮ್ ಬುಕ್ ತಗೊಳೋಕೆ ದುಡ್ಡು ಕೊಡ್ತಾ ಇರ್ಲಿಲ್ಲ ಬೇರೆ) . ಕೊನೆಗೆ ಅದು  ಅಮ್ಮನ ,ಫೋನ್ ನಂಬರ್, ಅದು ಇದು ಲೆಕ್ಕ ಬರಿಯೋ ಬುಕ್ಕಾಗಿ ಮೂಲೆ ಸೇರಿ ಹೋಯ್ತು. ಸೀರಿಯಸ್ ವಿಷ್ಯ ಅಂದ್ರೆ ಯಾರೋ ಹುಡುಗ ಯಾವುದೋ ಹುಡುಗಿ ಬುಕ್ ನಲ್ಲಿ ಸ್ವಲ್ಪ ಓವರ್ ಆಗಿ ಬರೆದ ಅಂತ ಅವ್ಳು ಅದ್ನ ಹರಿದು ಹಾಕಿದ್ದು , ಅದು ಮಾಸ್ಟರ್ ಗೆ ಗೊತ್ತಾಗಿ, ಆಮೇಲೆ ಯಾರು ಆಟೋಗ್ರಾಫ್ ಬರೆಸಬೇಡಿ ಅಂದಿದ್ದು ಎಲ್ಲಾ ಈಗ ಇತಿಹಾಸ ಅಂತಾನೆ ಹೇಳಬಹುದು.
ಇನ್ನ 10ನೆ ತರಗತಿಯಲ್ಲೂ ಅಷ್ಟೇ ಪಾಕೆಟ್ ನಲ್ಲಿ ಇಟ್ಕೊಂಡು ಇರಬಹುದು ಅಂತ ಸಣ್ಣ ಬುಕ್ ನಲ್ಲೆ ಬರ್ಸಿದ್ದೆ. ಅದಿನ್ನೂ ಇದೆ . ಅದ್ರಲ್ಲಿ ಮರಿಯೋಕೆ ಆಗದ ಒಂದು line ಇದೆ . pehle engineering ka spelling seeklo. ಅದನ್ನ ನನ್ನ ಹಿಂದಿ ಮಾಸ್ಟರ್ ಬರ್ದಿದ್ದು . ಕಾರಣ ಇಷ್ಟೇ- ನಾನು 8ನೇ ತರಗತಿ ಇದ್ದಾಗ ಒಮ್ಮೆ ಅವರು ಕ್ಲಾಸ್ ಗೆ ಬಂದು ಯಾರ್ಯಾರಿಗೆ ಏನೇನ್ ಆಗಬೇಕು ಅಂತ ಆಸೆ ಇದ್ಯೋ ಬೋರ್ಡ್ ಮೇಲೆ ಬರೀರಿ ಅಂತ ಅಂದ್ರು. ನಾನು ಇಂಗ್ಲಿಷ್ ನಲ್ಲಿ (ದೊಡ್ಡ hero ತರ) engineer ಅಂತ ಬರ್ದಿದ್ದೆ. ಆದರೆ spelling ಮಾತ್ರ ತಪ್ಪು ಬರ್ದಿದ್ದೆ( ಏನ್ ತಪ್ಪು ಮಾಡಿದ್ದೆ ಅಂತ ನೆನಪಿಲ್ಲ). ಅದನ್ನ ಅವ್ರು ಶಾಲೆ ಬಿಡೋವಾಗ ಆಟೋಗ್ರಾಫ್ ನಲ್ಲಿ ಬರ್ದಿದ್ರು. (ಆಗ engineer ಅಂದ್ರೆ ಏನು ಅಂತ ಪರಿಕಲ್ಪನೆ ಕೂಡ ಇರ್ಲಿಲ್ಲ but now ನಾನೊಬ್ಬ so called software engineer).

ಇನ್ನು ಕಾಲೇಜು ಲೈಫ್ ಗೆ ಬಂದ್ರೆ co-education ಇದ್ದಿದ್ರೂ ಅದೊಂತರ ಬಾಯ್ಸ್ and ಗರ್ಲ್ಸ್ ಕಾಲೇಜ್ ನ ಮಿಕ್ಸ್ ಮಾಡಿದ ಹಾಗೆ ಇತ್ತು. ಅವ್ರ ಪಾಡಿಗೆ ಅವ್ರು , ನಮ್ ಪಾಡಿಗೆ ನಾವು. ಎಲ್ಲೋ ಅಲ್ಲೊಂದು ಇಲ್ಲೊಂದು ಮಾತಾಡಿದ್ರೆ ಹೆಚ್ಚು. ಆದ್ರೆ 2nd ಇಯರ್ ಕೊನೆಗೆ ಎಲ್ರು ಸ್ವಲ್ಪ ಫ್ರೆಂಡ್ಸ್ ಆಗೋಕೆ ಶುರು ಆಗಿದ್ರು. ಹೆಂಗೋ ಬಿಟ್ಟೋಗ್ತಿವಲ್ಲಾ ಅಂತ ಆಟೋಗ್ರಾಫ್ ಬರ್ಸಿದ್ದೆ. ಬರ್ದಿದ್ದೆ ಕೂಡ. ಅದನ್ನ ಇಲ್ಲಿವರೆಗೆ  3 4 ಬಾರಿಯಾದರೂ ಓದಿದೀನಿ . ಓದಿದಾಗೆಲ್ಲಾ ನಗು ಮಾತ್ರ ತಡ್ಕೊಳೋಕೆ ಆಗಿಲ್ಲ. ಅದ್ರಲ್ಲಿ ಒಬ್ಬೊಬ್ರುದು ಒಂದೊಂದು ಕಥೆ. ನನ್ನ ಫ್ರೆಂಡ್ ಮನು ಅಂತು ಫುಲ್ ಫಿಸಿಕ್ಸ್ ನೆ ಬರ್ದಿದಾನೆ(ಈಗಲೂ ಓದಿದ್ರೆ exam ಲಿ 10 ಮಾರ್ಕ್ಸ್ ಪಕ್ಕ).
ಇನ್ನು ಚಂದ್ರು ಅಂತು ಫುಲ್ ಬಯಾಲಜಿ ಸ್ಟೋರಿ ನೆ ಕೆತ್ತಿದಾನೆ ( ಅದು ಅಷ್ಟೇ 10 ಮಾರ್ಕ್ಸ್ ಗಂತು ಕೊರತೆ ಇಲ್ಲ ). ಇನ್ನು ಉಳ್ದೊರ್ದು ಎಲ್ಲಾ just copy paste ಅಂತಾನೆ ಹೇಳಬಹುದು.  ಕೆಲವರು ಮಾತ್ರ ಒಂದಿಷ್ಟು ಕಥೆ ಪುರಾಣ ಬರ್ದಿದಾರೆ. ಆಗ ನಾನು ಚಂದ್ರು ಸ್ವಲ್ಪ ಜಾಸ್ತಿ ಮಾತಾಡ್ತಾ ಇದ್ವಿ, so ಅವ್ನು ಹೊಸ ಆಟೋಗ್ರಾಫ್ ಬುಕ್ ತಗೊಂಡು ಫಸ್ಟ್ ನನ್ ಕೈಗೆ ಕೊಟ್ಟು ಬರಿ ಅಂದ. ನಾನೋ ಶುದ್ಧ ತರ್ಲೆ ನನ್ ಮಗ.
ಅದ್ರಲ್ಲಿ ಹಾಯ್ ಚಂದ್ರು, ಹೊಸ ಮನೆ, ಹೊಸ ಹೆಂಡ್ತಿ ....... ಅದ್ಭುತ ಅನ್ನೋ add ನ ಬರ್ದಿದ್ದೆ, ಅದೂ ಶುರುವಿನಲ್ಲೇ. ಅದ್ನ ನೋಡಿ ಅವನಿಗೆ ತಲೆ ಕೆಟ್ಟು- ಹೀಗೇನೋ ನೀನ್ ಬರಿಯೋದು ಅಂತ ಹೇಳಿ ಆಮೇಲೆ ಹೊಸ ಬುಕ್ ತಗೊಂಡು ಬೇರೆಯವರ ಕೈಲಿ ಆಟೋಗ್ರಾಫ್ ಬರೆಸಿಕೊಂಡ.
ಇನ್ನು ನಾನೇನ್ ಕಮ್ಮಿ ಇರ್ಲಿಲ್ಲ. ಆಗೆಲ್ಲಾ ಉಪೇಂದ್ರs FAN AC ಆಗಿದ್ವಿ. ಉಪೇಂದ್ರs ಫೇಮಸ್ dialog i am god , god is great  ಅನ್ನೋದು ನಮ್ದು favt. ಅದೇ ತರ ನಾನು ಏನೋ ಬರ್ದಿದ್ದೆ ಎಲ್ರ auto ಬುಕ್ ನಲ್ಲಿ. ನಾನು ಬರ್ದಿದ್ದು ಅರ್ಥ ಬೇರೇನೆ ಇತ್ತು. ಎಲ್ರು ಅದ್ನ ಅನರ್ಥ ಮಾಡಿ ನನ್ನ ಕಾಲು ಎಳೆದು ಬಿಟ್ರು( ಅದು PU ಮುಗಿದಮೇಲೆ ಎಲ್ರು ಒಮ್ಮೆ ಸಿಕ್ಕಾಗ ಫ್ರೆಂಡ್ಸ್ ಎಲ್ಲಾ ಸೇರಿ ಗೇಲಿ ಮಾಡಿದ್ರು).

ಕೊನೆಯದಾಗಿ engineering ಲೈಫ್ ಲಿ ಬರ್ಸಿದ್ದು ಅಂತಾ ಹೇಳ್ಕೊಲ್ಲೋವಂತದು ಅಲ್ಲಾ. ಅದಾಗಲೇ FB, ಮೊಬೈಲ್ ಅನ್ನೋದು familiar ಆಗ್ಬಿಟ್ಟಿತ್ತು. ಇನ್ನು ಎಲ್ರು predefined questions ಇದ್ದ ಆಟೋಗ್ರಾಫ್ ಬುಕ್ ತಂದು ಕೊಟ್ಟಾಗ ಅದ್ರಲ್ಲಿ ಏನು ಅಂತ ಬರಿಯೋದು. ನಮ್ ಹೆಸರು, ಅಡ್ರೆಸ್, ಇಷ್ಟ , nonಇಷ್ಟ etc. ಒಂತರ RESUME ಅಂತಾನೆ ಹೇಳಬಹುದು. ಮತ್ತೆ ಕೊನೆಗೆ ಅರ್ಧ line ಖಾಲಿ ಜಾಗ , ನಮ್ಮ ಅನಿಸಿಕೆ ಅಭಿಪ್ರಾಯನ ಬರಿಯೋಕೆ . ALL the best good luck ಗಿಂತ ಬೇರೆ ಏನು ಬರಿಯೋಕೆ ಆಗತ್ತೆ ಅದರಲ್ಲಿ...??!!!
(ವಿಷ್ಯ ಏನಪ ಅಂದ್ರೆ 2 ವರ್ಷ ಆಗ್ತಾ ಬಂತು BE ಮುಗಿಸಿ, ನನ್ ಆಟೋಗ್ರಾಫ್ ಬುಕ್ ಇನ್ನು ನನ್ ಫ್ರೆಂಡ್ ಹತ್ರಾನೇ ಇದೆ , ಯಾವಾಗ ರಿಟರ್ನ್ ಮಾಡ್ತಾನೋ ಗೊತ್ತಿಲ್ಲಾ Mr.CENA......!!! ಕಾದು ನೋಡ್ಬೇಕು............)

ನನ್ನ 7th std ಆಟೋಗ್ರಾಫ್ ಬುಕ್ ನಲ್ಲಿ ಹೆಚ್ಚಿನವರು ಬರೆದ ವಿಷ್ಯ ಅಂದ್ರೆ...
ಪರೀಕ್ಷೆ ಎಂಬ ಯುದ್ಧದಲ್ಲಿ,
ಪೆನ್ನು ಎಂಬ ಖಡ್ಗ ಹಿಡಿದು,
ಇಂಕು ಎಂಬ ರಕ್ತ ಚೆಲ್ಲಿ,
ಜಯಶೀಲನಾಗಿ ಬಾ....................
ಇದನ್ನ ನಮ್ ಹಳ್ಳಿ school ನ ಯಾವುದೇ ವರ್ಷದ , ಯಾರ ಆಟೋಗ್ರಾಫ್ ಬುಕ್ ತೆಗೆದರು ನೀವು ಕಾಣಬಹುದು. ಆಗಿನ ಕಾಲಕ್ಕೆ ನಾವೆಲ್ಲ ಒಂತರ software engineers. ಹೆಂಗಂತೀರ ...........??!!
ಗೊತ್ತಾಯ್ತು ಅನ್ಕೊತೀನಿ ... ಇಲ್ವಾ.... (ctrl+c, ctrl_v) ಅಷ್ಟೇ..!!
ಸ್ವಂತದ್ದು ಅಂತ ಏನು ಬರಿತ ಇರ್ಲಿಲ್ಲ ಬಿಡಿ...!!!!

Sumne haage.............



" ಮರೆಯಾದಂತೆ ನೀನು ಈ ನನ್ನ ಕಣ್ಣೆದುರಿಂದ , ಮರೆ ಮಾಡಲಾರೆ ನಿನ್ನ ನಾ ಈ ನನ್ನ ಮನದಿಂದ
ಮರು ಘಳಿಗೆಯಲ್ಲಾದರೂ ಸರಿ, ಮರು ಜನ್ಮದಲ್ಲಾದರೂ ಸರಿ ಕಾಯುವೆ ನಿನಗಾಗೇ ನಾ ಕಾತುರದಿಂದ"..
-----------------------------------------------------------------------------------------------

" ಬಾಳ ದಾರಿಯಲ್ಲಿ ನೀ ಜೊತೆಗಿದ್ದರೆ ಸಾಕು,
ನೆನಪುಗಳ ಹೊತ್ತಿಗೆಯ ಮೂಟೆ ಕಟ್ಟಿ ಅಟ್ಟಕ್ಕೆ ಹಾಕುವೆ "
-------------------------------------------------------------------------------------------------------
"ಹೊತ್ತು ಮುಳುಗಿದಾಗ,

ಸುತ್ತ ನೀನಿರದಾಗ,

ಸತ್ತ ಸಮಯವೊಂದೆ ಜೊತೆಯಾದಾಗ,

ಎತ್ತ ಹೋಗಲಿ ನಾ.....ಗೆಳತಿ.........??"
----------------------------------------------------------------------------------------------------------------



" ತೆರೆದಿಟ್ಟ ಪುಸ್ತಕದ ಮೂಲೆಯಲ್ಲೆಲ್ಲೋ ನಿನ್ನ ಹೆಸರ ಗೀಚಿದ ನೆನಪು,...

ನನಗೇನು ಗೊತ್ತಿತ್ತು ಅದು ಮೂಡುವುದೆಂದು ಈ ನನ್ನ ಹೃದಯದ ಗೋಡೆಯ ಮೇಲಕೂ "!!...

---------------------------------------------------------------------------------------------------------------

ಹನಿಗವನಗಳು.....



ಹಾಗೆ ಸುಮ್ನೆ::

1) ಒಬ್ಬಂಟಿ ನಾನಲ್ಲ ನೀನಿರುವಾಗ,
ಆದರೆ ನೀನಿಲ್ಲವಲ್ಲ,
ನಾ ಕೂಗಿ ಕರೆದರೂ ,
ನಿನಗೆ ಕೇಳಲಿಲ್ಲವಲ್ಲ,
ನಾ ಗೋಗರೆದರೂ
ಹೇಳಲಿಲ್ಲ ನೀ ಕಾರಣವ..!!

ಹೇಗಾದರೂ ಇರುವೆ
ನನ್ನ ಹೊರತಾಗಿ,
ನೀನೆ ನನ್ನ ಜೀವ ಎಂದಿದ್ದೆ,..
ಈ ಜೀವ ಬದುಕಿರುವಾಗಲೇ ,
ಏಕೆ ನೀ ನನ್ನ ತೊರೆದೆ
ಹೇಳು ನೀ ಕಾರಣವ..??.

ನಿನ್ನ ಮಡಿಲಲ್ಲಿ
ಮಗುವಾಗುವಾಸೆಯಿಂದಿದ್ದೆ,
ಅಷ್ಟರಲ್ಲಾಗಲೆ ನೀ ಬೇರೆಯವರ
ಬಾಹು ಬಂಧನದಲ್ಲಿ ಬಂದಿಯಾಗಿದ್ದೆ,
ಇನ್ನೇನು ಉಳಿದಿದೆ ಹೇಳಲಿಕ್ಕೆ -ಕೇಳಲಿಕ್ಕೆ
ಹೇಳಬೇಡ ನೀ ಕಾರಣವ... ...... ....
----------------------------------------------------------------    -------------------------------

2) " ಕಾದಿರುವೆ ನಿನಗಾಗಿ ,ಕಾಯುವೆನು ನಿನಗಾಗಿ ,
ಬಂದು ಹೋಗೆನ್ನ ಗೆಳತಿ,

ತುಸುವಾದರೂ ನುಡಿ ,ಪಿಸುಮಾತದರೂ ಸರಿ,
ಈ ಮೌನವೇಕೆ ಗೆಳತಿ,

ಪದಗಳಲಿ ಬಣ್ಣಿಸಲೆ ,ಕುಂಚದಲಿ ಚಿತ್ರಿಸಲೆ, ನಿನ್ನ
ತಿಳಿಯದಾಗಿದೆ ಗೆಳತಿ,

ಕರೆಯೊಂದ ನೀ ಮಾಡು, ಕಷ್ಟಪಟ್ಟಾದರೂ ಸರಿ,
ಓಡೋಡಿ ಬರುವೆ ನಾ ಗೆಳತಿ"
--------------------------------------------------------------------------------------------------------
3)


ನನ್ನೊಳಗೆ ಹುದುಗಿತ್ತು ಮೌನವೊಂದು ,
ಮೌನದೊಳಗಿತ್ತು ಹೇಳಲಾಗದ ಮಾತೊಂದು,
ಮಾತಿಗೂ ಸಿಲುಕದ ಮೂಕ ಭಾವನೆಯೊಂದು,
ಭಾವನೆಗೂ ನಿಲುಕದ ಮುಗ್ಧ ಮನಸೊಂದು,

ಪದೆ ಪದೆ ಕಾಡಿದೆ ಹಳೆಯ ನೆನಪೊಂದು,
ನೆನಪುಗಳಲ್ಲೇ ಕಟ್ಟಬಹುದೇನೋ ಪುಟ್ಟ ಅರಮನೆಯೊಂದು,
ಅದರಲ್ಲಾದರೂ ಇರಬಹುದೇನೋ ಇಬ್ಬರು ಕೂಡಿಕೊಂಡು,
ಅದರ ಮೇಲೂ ಬೀಳಬಹುದು ವಿಧಿಯ ಕರಿ ಛಾಯೆಯೊಂದು,

ಕನಸಲ್ಲಿ ಕಾಣುವುದು ಒಂದು,
ಆದರೆ ನನಸಲ್ಲಿ ನಡೆಯೋದು ಇನ್ನೊಂದು,
ನಾವಂದು ಕೊಂಡoತೆ ಆಗದು ಏನೊಂದು,
ಅದಕ್ಕೆ ಹೇಳುವುದೇನೋ -- ಎಲ್ಲಾದಕ್ಕೂ ಪಡೆದುಕೊಂಡು ಬಂದಿರಬೇಕೆಂದು....!!
---------------------------------------------------------------------------------------------------

4)
"ಅವಳನ್ನ ಹುಚ್ಚನ ತರ ಪ್ರೀತಿಸಿದೆ, ನನ್ನೇ ಹುಚ್ಚ ಅಂದ್ಲು..
ಮನ ತುಂಬಿ ಇಷ್ಟ ಪಟ್ಟೆ, ಮನಸ್ಸೆ ಇಲ್ಲ ಅಂದ್ಲು..
ಸ್ವಲ್ಪನಾದ್ರು ಅರ್ಥ ಮಾಡ್ಕೊ ಅಂದೆ, ವ್ಯರ್ಥ ಪ್ರಯತ್ನ ಅಂದ್ಲು..
ಪ್ರೀತಿ ಎಂದಾದ್ರು ವ್ಯರ್ಥ ಆಗತ್ತಾ ಅಂದೆ, ಅದು ನಿನ್ನ ಸ್ವಾರ್ಥ ಅಂದ್ಲು..
ಸ್ವಾರ್ಥ ಇಲ್ಲದಿರೋ ಪ್ರೀತಿ ಇದೆಯಾ ಅಂದೆ, ತ್ಯಾಗ ಮಾಡು ಅಂದ್ಲು..
ತ್ಯಾಗ ಮಾಡಿದ್ರೆ ಪ್ರೀತಿ ಸಿಗುತ್ತಾ ಅಂದೆ, ಇಲ್ಲಾ ಆದ್ರೆ ಪ್ರೀತಿ ಗೆಲ್ಲುತ್ತೆ ಅಂದ್ಲು..
ಅದರರ್ಥ ನಾನು ಅವಳ ಮನಸಲ್ಲಿ ಇದಿನಿ ಅಂದ್ಲು......."

ಹನಿಗವನಗಳು.....



`1) ಕಾದಿದ್ದ ಕಾರಿರುಳ ರಾತ್ರಿಯೂ
ಬೆಳದಿಂಗಳಂತೆ ಕಂಗೊಳಿಸಿತ್ತು..
ನೆನಪಿಸಿಕೋ ಒಮ್ಮೆ..
ನೆನಪುಗಳು ಮರೆಯುವ ಮುನ್ನ...!!

ನೀ ನಡೆದ ಹಾದಿಯೆಲ್ಲ
ಹಸಿರಿನಿಂದ ಕಣ್ ಕುಕ್ಕುತ್ತಿತ್ತು,
ನೆನಪಿಸಿಕೋ ಒಮ್ಮೆ
ನೆನಪುಗಳು ಮರೆಯುವ ಮುನ್ನ..!!

ಬೀಸೋ ತಂಗಾಳಿಯು
ಉಸುರುತಿತ್ತು ನಿನ ಹೆಸರನ್ನೇ .
ನೆನಪಿಸಿಕೋ ಒಮ್ಮೆ
ನೆನಪುಗಳು ಮರೆಯುವ ಮುನ್ನ..!!

ನೀ ಆಲಿಸಿದ್ದೆ ನನ್ನ ಎದೆ ಬಡಿತವ
ನಿನ್ನದೇ ಸದ್ದು ಈ ಎದೆಯಲ್ಲೆಲ್ಲ.
ನೆನಪಿಸಿಕೋ ಒಮ್ಮೆ
ನೆನಪುಗಳು ಮರೆಯುವ ಮುನ್ನ..!!

ನೀ ಹಿಡಿದು ನೋಡಿದ್ದೇ ನನ ನಾಡಿಯ
ನಿನಗಾಗೆ ಮಿಡಿಯುತ್ತಿದ್ದದ್ದ.
ನೆನಪಿಸಿಕೋ ಒಮ್ಮೆ
ನೆನಪುಗಳು ಮರೆಯುವ ಮುನ್ನ..!!

ನೀ ಬಿಟ್ಟು ಹೋಗೋ ಮೊದಲು
ನನದೊಂದು ಪುಟ್ಟ ಮನವಿ..
ನೆನಪಿಸಿಕೋ ಒಮ್ಮೆ
ನೆನಪುಗಳು ಮರೆಯುವ ಮುನ್ನ..!!
--------------------------------------------------------------------
2)
ನಾ ನಕ್ಕಿದ್ದೆ ಅಂದು ನಿನ ನಗುವ ಕಂಡು,
ಕಾತುರದಿ ಕಾದಿದ್ದೆ ಮುತ್ತುದುರಬಹುದೆಂದು,
ಸಿಕ್ಕರೆ ಸಿಗಬೇಕು ನನಗೇ ಎಂದು,
ಕಣ್ಣು ಮಿಟುಕಿಸದೆ ಕುಳಿತಿದ್ದೆ ನಾನಂದು...
  
ಆ ನಗುವಲ್ಲೇ ಮೂಡಿತ್ತು ಮಿಂಚೊಂದು.,
ನನ ಮನದಲ್ಲಿ ಎದ್ದಿತ್ತು ಸಂಚಲನವೊಂದು.
ಯೋಚಿಸುವುದರೊಳಗೆ ಏನಾಗುತ್ತಿದೆಯೆಂದು,
ಬಲಿಯಾಗಿ ಹೋಗಿದ್ದೆ ನಿನಗೆ ನಾನಂದು..

ನಗುವ ಹಿಂದಿತ್ತು ತಿಳಿ ಮೌನವೊಂದು,
ನಾ ಶಪಿಸಿದ್ದ್ದೆ ನೂರು ಬಾರಿ ಆ ಮೌನವನ್ನು.
ಅನಿಸಲಿಲ್ಲವೇ ನಿನಗೆ ಮೌನ ಮುರಿದು ನಗಬೇಕೆಂದು.
ಮತ್ತೊಮ್ಮೆ ಕಾದಿದ್ದೆ ಆ ನಗುವಿಗಾಗಿ ನಾನಂದು..
----------------------------------------------------------------
3)
ಇಂದು ನಾ ನಾನಾಗಿಲ್ಲ,
ಅದಕೆ ಕಾರಣ ಬೇರೆ ಹೇಳಬೇಕಿಲ್ಲ,
ತಡಕಾಡಿದೆ ನನ್ನ ಮನವೆಲ್ಲ ,
ನಿನ್ನ ಹೊರತು ಬೇರೇನಿಲ್ಲ,
ಕನವರಿಸಿದೆ  ರಾತ್ರಿಯೆಲ್ಲ,
ನಿನ್ನ ಬಿಟ್ಟು ಬೇರೆ ಕನಸಿಲ್ಲ,
ಬಡಬಡಿಸಿದೆ ದಿನವೆಲ್ಲ,
ನಿನ್ನ ಹೆಸರ ಹೊರತು ಬೇರೆ ಪದವಿಲ್ಲ,
ಬೀಸೋ ತಂಗಾಳೀನು ಬಿಡಲಿಲ್ಲ,
ಆದರೂ ನಿನ್ನ ಸುಳಿವಿಲ್ಲ,
ನಿನಗಾಗಿ ಹುಡುಕದ ಜಾಗವಿಲ್ಲ,
ಆದರೆ ನೀನೆಲ್ಲೂ ಇಲ್ಲವಲ್ಲ,
ಯಾಕೆ ಹೀಗೆ??
ಕಾರಣವ ನಾ ಕೇಳಲಿಲ್ಲ ,
ನೀ ಹೇಳುವ ಗೋಜಿಗೆ ಹೋಗಲಿಲ್ಲ,


ಹನಿಗವನಗಳು.....



ಹಾಗೆ ಸುಮ್ನೆ:: 

"ಹೊತ್ತು ಮುಳುಗುವ ಹೊತ್ತಲ್ಲಿ, 
ಅಮಲೇರಿದ ಮತ್ತಲ್ಲಿ.
ಹೊಳೆಯುತ್ತಿದ್ದ ನಿನ್ನ ಕಣ್ಣಲ್ಲಿ.
ಕಂಡೆ ನಾ  ನನ್ನದೇ ಬಿಂಬ

ನಾನಿದ್ದೆ ಭ್ರಮೆಯಲ್ಲಿ,
ಅರೆ ಪ್ರಜ್ಞೆ ಸ್ಥಿತಿಯಲ್ಲಿ,
ನಸು ನಕ್ಕೆ ನೀನಲ್ಲಿ,
ನೀನಿದ್ದೆ ಈ ಮನದ ತುಂಬ.

ಬಂಧಿ ನಾನಲ್ಲಿ,
ಆ ನಿನ್ನ ಮಡಿಲಲ್ಲಿ,
ಕರಗಿ ಹೋದೆ ಆ ಕ್ಷಣದಲ್ಲಿ,
ನಾನಾಗಿದ್ದೆ ನಿನ ಪ್ರೀತಿಯ ಹುಂಬ..."
---------------------------------------------------------

"ಒಂದೇ ಒಂದು ಕ್ಷಣ - ಕ್ಷಣ..
ಭುಗಿಲೆದ್ದ ಕೋಲಾಹಲ..
ಎಲ್ಲಾ ಹಾಲಾಹಲ - ನನ್ನ ಮನ..
ಕಡೆದವರು ಯಾರೋ - ನಾಕಾಣೆ..
ಹಾಲಾಹಲವ ಕಡೆದರೆ ಬರುವುದೇ ಬೆಣ್ಣೆ..??
ಸುತ್ತಿ ಸುತ್ತಿ ಸುಳಿಯಂತಾಗಿದೆ..
ಸಿಕ್ಕಿ ನಾ ಸುಳಿಗೆ ಒದ್ದಾಡಿದೆ..
ನೀನೊಂದು ಸಾಗರವೆಂದರಿವಿದ್ದರೂ - ನಾ ಧುಮುಕಿದೆ..
ಸುಳಿಗೆ ಸಿಗುವುನೆಂಬ ಅರಿವಿದ್ದರೂ ..
ನಾ ಈಜಿ ಮುಂದೆ ಸಾಗಿದೆ..
ಹಿಂದ ಹೋಗಲು ಶಕ್ತಿ ಇಲ್ಲ..
ಕೈ ಹಿಡಿದು ಮೇಲೆತ್ತುವವರು ಇಲ್ಲ..
ಮುಳುಗುವುದೊಂದನು ಬಿಟ್ಟು ಬೇರೆ ದಾರಿ ಇಲ್ಲ.."
-----------------------------------------------------------------------------------

ನೆನ್ನೆ ಎಂಬುದು ಕಳೆದಿದೆ..
ನಾಳೆ ಎಂಬುದು ಬರಬೇಕಿದೆ..
ನೆನ್ನೆ ನಾಳೆಗಳ ನಡುವೆ ಇಂದನ್ನು ಮರೆತಂತಿದೆ..

ನೆನ್ನೆ ಎಂಬುದು ಮತ್ತೆ ಬಾರದು..
ನಾಳೆ ಏನು ಎಂಬುದು ಗೊತ್ತೇ ಆಗದು...
ಅವೆರಡರ ಚಿಂತೆಯಲ್ಲಿ ಇಂದನ್ನು ಅನುಭವಿಸಲಾಗದು..

ನೆನ್ನೆಯ ನೆನಪುಗಳೆಂದು ಮಾಸದು..
ನಾಳೆಯ ಕನಸುಗಳೆಂದು ಕರಗದು..
ನೆನಪು - ಕನಸುಗಳಾ ಹೊರತು , ಯಾವುದು ನನಸಾಗದು..

ನೆನ್ನೆಯ ನೆನಪುಗಳ ಮರೆತರೆ..
ನಾಳೆಯ ಆಸೆಗಳ ತೊರೆದರೆ..
ಇಂದಿನದನ್ನು ಇಂದೇ ಅನುಭವಿಸಿದರೆ .. ಬದುಕೆಷ್ಟು ಸುಂದರ....!!!!??