Thursday 4 September 2014

Sanna kathe ...2



ಅನಾಥ - ‘ಪ್ರೀತಿ’ ::

ಇವನೊಬ್ಬ ಅನಾಥ. ಅನಾಥ ಅಂದ್ರೆ ಹಿಂದು-ಮುಂದು ಯಾರು ಇಲ್ಲ ಅಂತ ಅಲ್ಲ. ಎಲ್ಲಾ ಇದ್ದು ಅವನೊಬ್ಬ ಅನಾಥ. ಹೌದು , ಯಾವುದೋ ವಿಷಗಳಿಗೆಯಲ್ಲಿ ಎಲ್ಲಾರಿಂದಲೂ ದೂರಾದ. ಮತ್ತೆಂದೂ ತನ್ನವರೆನ್ನೆಲ್ಲಾ ಸೇರಲಾರದಷ್ಟು ದೂರ. ಕಣ್ಣೆದುರಿಗಿದ್ದರೂ ಇವರೇ ತನ್ನವರೆಂದು ಗುರುತು ಹಿಡಿಯಲಾರ . ಯಾರ ಪಾಪದ ಬಸುರೋ , ಯಾರ ತೀಟೆ ತೀರಿಸಿಕೊಳ್ಳಲು ಹುಟ್ಟಿಸಿದ್ದೋ , ಹೆತ್ತ ಮರುಕ್ಷಣವೇ ಹೆತ್ತವರು ತಿಪ್ಪೆ ಪಾಲು ಮಾಡಿದರಲ್ಲ. ಯಾರು ನೋಡಿದರೋ, ಯಾರು ಹಾಲುಣಿಸಿದರೋ, ತಿಳಿಯದು. ಅಂತು ಬೀದಿ ಬದಿಯ ಹೆಣವಾಗಬೇಕಿದ್ದ ಜೀವವೊಂದು , ಬೀದಿ ನಾಯಿಯ ಬಾಳು ಬಾಳಿತು.
ಯಾರು ಕರೆದು ಅನ್ನ ಹಾಕಿದರೋ, ಯಾರು ಕರೆದು ಶಾಲೆಗೆ ಸೇರಿಸಿದರೋ ಎಲ್ಲವೂ ಯಾರು – ಯಾಕೆ ಎಂಬ ಪ್ರಶ್ನೆಯೇ ಹೊರತು ಒಂದಕ್ಕೂಉತ್ತರವಿಲ್ಲ. ಓದಿದ ಓದು ಲೋಕಜ್ಞಾನಕ್ಕಾಯಿತೇ ಹೊರತು ತಲೆಗೆ ಕಿಂಚಿತ್ತೂ ಹತ್ತಲಿಲ್ಲ. ಆದರೆ ವಿದ್ಯೆಯ ಸರಸ್ವತಿ ಒಲಿಯದಿದ್ದರೇನಂತೆ, ಸಂಗೀತದ ಶಾರದೆ ಒಲಿದಳಲ್ಲ.
ಹೌದು ಹವ್ಯಾಸಕ್ಕೆಂದು ಶುರುವಾದ ಸಂಗೀತಾಸಕ್ತಿ ಕೊನೆಗೆ ಉಸಿರಾಗಿ ಹೋಯಿತು. ಸಂಗೀತವೆ ತಂದೆ-ತಾಯಿ ಬಂಧು-ಬಳಗ ಎಲ್ಲಾ.
ಜೈಲಿನಲ್ಲಿ ಹುಟ್ಟಿದ ಕೃಷ್ಣನಿಗೊಲಿದದ್ದೂ ಅದೇ ಕೊಳಲು. ತಿಪ್ಪೆಗುಂಡಿಯಲ್ಲಿ ಕಣ್ಬಿಟ್ಟ ಇವನಿಗೊಲಿದಿದ್ದೂ ಅದೇ ಕೊಳಲು. ಆ ಕೃಷ್ಣನಿಗೋ ಹದಿನಾರು ಸಾವಿರ ಗೋಪಿಕೆಯರು. ಇವನಿಗೆ ಹತ್ತಿರ ಹೋದರೂ ದೂರ ನಿಲ್ಲುವ ಹುಡುಗಿಯರು.
ಎಲ್ಲರ ಜೀವನದಲ್ಲೂ ಬದಲಾವಣೆಯ ಗಾಳಿ ಎಂಬುದು ಬೀಸಲೇಬೇಕು. ಹಾಗೆ ಇವನ ಜೀವನದಲ್ಲೂ ಬೀಸಿತೊಂದು ತಂಗಾಳಿ. ತನಗರಿಯದೆ ತಾ ಸೋತ , ಮೈಮರೆತ. ಎಲ್ಲೋ ಇವನ ಕೊಳಲು ನಾದ ಕೇಳಿದವಳು ಇಷ್ಟ ಅಂದಳು. ಅಷ್ಟೇ ಅಂದಿದ್ದರೆ ಪರವಾಗಿರಲಿಲ್ಲವೇನೋ ,ಸಂಗೀತದ ಜೊತೆಗೆ ನೀನು ಇಷ್ಟ ಅಂದಳು.
ಬರಡಾಗಿದ್ದ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಂತಾಗಿತ್ತು ಇವನ ಪರಿಸ್ಥಿತಿ. ಜಗತ್ತಿನಲ್ಲಿ ಸಂಗೀತ ಬಿಟ್ಟು ಉಳಿದ್ದದ್ದೆಲ್ಲವೂ ಸುಳ್ಳು, ಮೋಸ ಎಂದು ನಂಬಿದ್ದವನಿಗೆ , ಅವನ ಮೇಲೆ ನಂಬಿಕೆಯಿಟ್ಟು ಬಂದವಳಿಗೆ ಏನು ಹೇಳಬೇಕೋ ತಿಳಿಯದೇ ಹೋಯಿತು. ದಿನಗಳುರುಳಿದರೂ ಒಮ್ಮೆಲೇ ಬೀಸಿದ ಬದಲಾವಣೆಯ ಗಾಳಿಗೆ ಏನು ಮಾಡಬೇಕೋ ತೋಚದೆ ಹೋಗಿದ್ದ. ಜೀವನದಲ್ಲಿ ಮೊದಲ ಬಾರಿ ಸಿಕ್ಕ ಪ್ರೀತಿಯನ್ನು ಒಪ್ಪಿಕೊಳ್ಳಲೋ ಅಥವಾ ಅವಳು ಮೆಚಿದ್ದು ಕೇವಲ ತನ್ನ ಸಂಗೀತವನ್ನ , ಅಂತರಾತ್ಮವನ್ನಲ್ಲಾ ಎಂಬ ಕಹಿ ಸತ್ಯವ.
ಅಂತು ಇವನ ಉತ್ತರಕ್ಕಾಗಿ ಕಾದವಳು ಕೊನೆಗೆ ಕಣ್ಮರೆಯಾಗೇ ಹೋದಳು. ಎಲ್ಲಿಂದ ಬಂದವಳೋ, ಈಗ ಎಲ್ಲಿಗೆ ಹೋದಳೋ ಒಂದೂ ಇವನಿಗೆ ಗೊತ್ತಿಲ್ಲ. ಹುಟ್ಟಿದ್ದು ಅನಾಥನಾಗಿಯೋ , ಹುಟ್ಟಿದ ಮೇಲೆ ಅನಾಥನಾದನೋ, ಅನಾಥನಿಗೆ ಸಿಕ್ಕ ಪ್ರೀತಿ ಅನಾಥವಯಿತೋ ಅಥವಾ ಸಿಕ್ಕ ಪ್ರೀತಿಯೂ ಅವನನ್ನು ಅನಾಥನನ್ನಾಗಿ ಮಾಡಿತೋ........
ಏನೂ ಅರಿಯದೆ ಕುಳಿತ ಮರದಡಿಗೆ ಸುಮ್ಮನೇ ಕೊಳಲನೂದುತ್ತ.

ಬರೆದವರು:
ಸತ್ಯ..,