Wednesday 24 December 2014

Haleya barahagalu ... (10)

(ಅಲೆಗಳಿಗೆ ದಡವ ಸೇರುವ ತವಕ..ಒಮ್ಮೊಮ್ಮೆ ಅಲೆಯಾಗಿ ಒಮ್ಮೊಮ್ಮೆ ತೆರೆಯಾಗಿ ಮತ್ತೊಮ್ಮೆ ಸುನಾಮಿಯಾಗಿ..!! ಏನೇ ಮಾಡಿದರೂ ದಡವ ಸೇರುವ ಅಲೆಗಳ ಆಸೆ ಎಂದಿಗೂ ಮರೀಚಿಕೆ...!??
ಎಷ್ಟೇ ಆಸೆಯಿಂದ ಉಕ್ಕಿ ಬಂದರೂ ಕೊನೆಗೆ ಕಡಲ ಒಡಲಾಳದ ಪ್ರೀತಿಗೆ ಸೋತು ಮರಳಿ ಮಡಿಲ ಸೇರುವುದು. ಪ್ರತಿದಿನ ಇದ ಕಾಣುವ ಸೂರ್ಯ - ಚಂದ್ರರು ಕೇವಲ ಮೂಕ ಪ್ರೇಕ್ಷಕರು...)
ಹೊತ್ತು ಹೊತ್ತಾದರೂ ತನ್ನಾಟ ಇನ್ನೂ ಮುಗಿಯದು..
ಒಡಲ ಒತ್ತಿ ಎದೆಯು ಉಕ್ಕಿ ದಡವ ಸೇರ ಬರುವುದು..
ಕೈಯ ಚಾಚಿ ದಡವ ಬಾಚಿ ನಿಲುವುದು..
ಕೈಯು ಬತ್ತಿ ಮೌನವಾಗಿ ಮರಳಿ ಕಡಲ ಸೇರ್ವುದು..
ಮತ್ತೆ ಮತ್ತೆ ಪ್ರೀತಿ ಉಕ್ಕಿ ಬಿಕ್ಕಿ ಬಿಕ್ಕಿ ಅಳುವುದು..
ಅಳುವ ಕಂಡ ಬಾನು ತಾನು ಜೊತೆಗೆ ದನಿಯಾಗುವುದು..
ಕಳ್ಳನಂತೆ ಮುಗಿಲ ಹಿಂದೆ ಚಂದ್ರ ತಾನು ಅಡಗುವನು..
ದೂರದಿಂದ ಮರುಕ ತೋರಿ ರವಿಯು ತೆರೆಯ ಮರೆಗೆ ಸರಿವನು..
ಮಾತ ಮುರಿದು ಮೌನ ತಳೆದು ಅಲೆಯು ಮರಳಿ ಕಡಲ ಸೇರ್ವುದು..
ಕೊನೆಗೂ ಏಕಾಂತದ ಕರಿ ಛಾಯೆ ಕಡಲನೆಂದು ಬಿಡದು..

=====================================================

Dedicated to my mom and all women. :

ಹೆತ್ತವಳಿವಳು ಹೊತ್ತವಳಿವಳು
ಕೈತುತ್ತು ಕೊಟ್ಟವಳಿವಳು..
ಬದುಕು ಬರೆದವಳಿವಳು ಕನಸ ತೊರೆದವಳಿವಳು
ಕೈಹಿಡಿದು ನಡೆಸಿದವಳಿವಳು..
ತಿದ್ದಿ ಬುದ್ದಿ ಹೇಳಿದವಳಿವಳು ವಿದ್ಯೆ ಕಲಿಸಿದವಳಿವಳು
ಕೈ ಹಿಡಿದು ಬರೆಸಿದವಳಿವಳು..
ನೋವನುಂಡವಳಿವಳು ತನುವ ತೇಯ್ದವಳಿವಳು
ನೋವ ಮರೆಸಿ ನಗುವ ತರಿಸಿದಳಿವಳು..
ಆಸೆ ಪಡದವಳಿವಳು ಪದವಿ ಕೇಳದವಳಿವಳು
ನಿಷ್ಕಲ್ಮಶ ಪ್ರೀತಿ ತೋರಿದವಳಿವಳು..
ಕತ್ತಲಲ್ಲಿ ಕೊರಗಿದಳಿವಳು ಬೆಳಕ ತೋರಿದಳಿವಳು
ಎಡವಿ ಬಿದ್ದಾಗ ಕೈಹಿಡಿದು ಮೇಲೆತ್ತಿದವಳಿವಳು..
ಬೈದರೂ ಬೈಸಿಕೊಂಡವಳಿವಳು ಮರು ಮಾತು ಆಡದವಳಿವಳು
ಸೆರಗಿನಲ್ಲೇ ಕಣ್ಣೀರ ಒರೆಸಿಕೊಂಡವಳಿವಳು..
ಹೊಗಳಿಕೆಗೆ ಉಬ್ಬದವಳಿವಳು ತೆಗಳಿಕೆಗೆ ಕುಗ್ಗದವಳಿವಳು
ಹಗ್ಗದ ಮೇಲಿನ ಜೀವನ ನಡೆಸಿದವಳಿವಳು..
ದೇವರನ್ನ ತೋರಿಸಿದವಳಿವಳು ದೇವರಿಗಿಂತ ದೊಡ್ಡವಳಿವಳು
ಅವಳೇ ಎಲ್ಲರ ತಾಯಿಯೆನಿಸಿಕೊಂಡವಳು..

No comments:

Post a Comment