Wednesday 24 December 2014

Sanna kathe ...6

"ಪವಿತ್ರಳು":

ಸಮಾಜದ ಕಣ್ಣಿಗೆ ಆಕೆ ಒಬ್ಬ ವೇಶ್ಯೆ. ಎದುರಿದ್ದಾಗ ಎಲ್ಲಾ ಹೀಯಾಳಿಸಿ ಮಾತಾಡುವವರೇ. ಹತ್ತಿರ ಸುಳಿದರು ಹತ್ತು ಅಡಿ ದೂರ ನಿಲ್ಲುವವರೇ. ಆದರೆ ರಾತ್ರಿಯಾಯಿತೆಂದರೆ ಮತ್ತಿನ ಗುಂಗಲ್ಲಿ ಎಲ್ಲಾ ಆಕೆಯ ಮಗ್ಗುಲಲ್ಲಿ ಬಿದ್ದು ಹೊರಲಾಡುವವರೇ. ಕಾರಣ “ಕಾಮಕ್ಕೆ ಕಣ್ಣಿಲ್ಲ” ಕೇವಲ ಕಣ್ಣಷ್ಟೇ ಅಲ್ಲ, ಮನಸ್ಸು –ಹೃದಯ ಯಾವುದೂ ಇಲ್ಲ.
ಆಗಷ್ಟೇ ಕಾಲೇಜು ಮುಗಿಸಿ ಪಟ್ಟಣ ಸೇರಿದವಳು ಅವಳು. ನೋಡಲು ಅಷ್ಟೇ ಸುಂದರಿ . ಕಾಲೇಜಿನಲ್ಲಿರುವಾಗಲೇ ‘ಕಾಲೇಜ್ ಕ್ವೀನ್ ‘ ಅನಿಸಿಕೊಂಡವಳು. ಪಕ್ಕದಲ್ಲಿ ಗೆಳತಿಯರಿದ್ದರೂ ಇವಳ ಕಡೆಗೆ ಗಮನ ಕೊಡದ ಹುಡುಗರೇ ಇಲ್ಲ ಅನ್ನಬಹುದು. ಓದಿನಲ್ಲಿ ಪ್ರಥಮವಲ್ಲದಿದ್ದರೂ ,ಹಿಂದೆಯಂತೂ ಇರಲಿಲ್ಲ. ಸೌಂದರ್ಯದ ಜೊತೆಗೆ ಅವಳ ನಡೆ-ನುಡಿಯು ಮೆಚ್ಚುವಂತದ್ದೆ. ಅಪ್ಪ – ಅಮ್ಮ ಒಂದು ಚಿಕ್ಕ ಕಿರಾಣಿ ಅಂಗಡಿ ನಡೆಸುತ್ತಿದ್ದರೂ, ಹೊಟ್ಟೆ –ಬಟ್ಟೆಗೇನು ಕೊರತೆಯಿರಲಿಲ್ಲ.ಮಗಳು ಬೆಳೆದು ದೊಡ್ದವಲಾಗಿದ್ದರು ,ಮದುವೆ ಮಾಡುವ ಯೋಚನೆಯಿದ್ದರು ಅವಳ ಕೆಲಸಕ್ಕೆ ಸೇರಿ ದುಡಿಯುವ ಹಠ ಇವರನ್ನು ಸುಮ್ಮನಾಗಿಸಿತ್ತು.
ಓದು ಮುಗಿಯುತ್ತಲೇ ಕೆಲಸ ಅರಸುತ್ತ ಪಟ್ಟಣ ಸೇರಿದಳು. ಹೊಸ ಜಾಗ, ಹೊಸ ಜೀವನ ಕಷ್ಟಕರವೆನಿಸಿದರೂ ಬಹುಬೇಗನೆ ಅದಕ್ಕೆ ಒಗ್ಗಿಕೊಂಡಳು. ಪರಿಚಿತರ ಸಹಾಯದಿಂದ ಒಂದು MNC ಕಂಪೆನಿಯಲ್ಲಿ receptionist ಆಗಿ ಕೆಲಸಕ್ಕೆ ಸೇರಿದ್ದಳು. ನೋಡಲು ಸುಂದರವಾಗಿದ್ದರಿಂದ , ಮಾತು ಚೆನ್ನಾಗಿ ಆಡುತ್ತಿದ್ದರಿಂದ ಕೆಲಸ ಗಿಟ್ಟಿಸಿಕೊಳ್ಳುವುದು ಕಷ್ಟವೇನು ಆಗಿರಲಿಲ್ಲ. ಕೆಲಸವೇನೋ ಚೆನ್ನಾಗಿ ಸಾಗಿತ್ತು.
ಒಂದುದಿನ ಎಂದಿನಂತೆ ತನ್ನ ಮೇಲ್ ಬಾಕ್ಸ್ ನೋಡುತ್ತಿದ್ದವಳಿಗೆ ಅವಳ ಮೇಲಾಧಿಕಾರಿಯಿಂದ ಬಂದ ಮೇಲ್ ಆಘಾತವನ್ನುಂಟು ಮಾಡಿತ್ತು. ಅದೂ ಅವಳು ಬೇರೆಬ್ಬನ ಜೊತೆ ಮಲಗಿರುವ ಭಂಗಿಯಲ್ಲಿ ಫೋಟೋ. ಒಮ್ಮೆಲೇ ಏನು ಮಾಡಬೇಕೆಂದು ತೋಚದೆ ಅವಾಕ್ಕಾಗಿ ಕುಳಿತು ಬಿಟ್ಟಳು. ಸ್ವಲ್ಪ ಸಮಯದ ನಂತರ ಸಾವರಿಸಿಕೊಂಡು ಇದೇ ಸರಿಯಾದ ಯೋಚನೆ ಎಂದು ನಿರ್ಧರಿಸಿ ತನಗೆ ಕೆಲಸ ಕೊಡಿಸಿದವರಿಗೆ ಕಾಲ್ ಮಾಡಲು ಅನುವಾದಳು. ಅಕಸ್ಮಾತ್ತಾಗಿ ಮೇಲ್ ನ ಕೆಳಗಿನ ಎರಡು ಸಾಲು ನೋಡಿದವಳಿಗೆ ಮತ್ತೊಂದು ಆಘಾತ ಕಾದಿತ್ತು. ‘ ನೀನು ಈ ರಾತ್ರಿ ಕೆಳಗಿನ ವಿಳಾಸಕ್ಕೆ ಬರದಿದ್ದರೆ ಈ ಫೋಟೋವನ್ನು ಅಂತರ್ಜಾಲದಲ್ಲಿ ಬಿತ್ತರಿಸುವುದಾಗಿ ‘ ಹಾಗು ಅದು ಅವಳಿಗೆ ಕೆಲಸ ಕೊಡಿಸಿದ ಮಹಾನುಭಾವನ ಅಡ್ರೆಸ್ಸೆ ಆಗಿತ್ತು. ಈಗ ಅವಳಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿತ್ತು.
ಆಫೀಸಿನಿಂದ ಬಂದವಳಿಗೆ ಏನು ಮಾಡಬೇಕೆಂದು ತೋಚಲಿಲ್ಲ . ಎಲ್ಲಾ ಬಿಟ್ಟು ಮನೆಗೆ ವಾಪಸ್ ಹೋಗಿ ಬಿಡಲೇ ..!! ಹಾಗೆ ಮಾಡಿದರೆ ನಾಳೆ ಅವಳ ಫೋಟೋ ಅಂತರ್ಜಾಲದಲ್ಲಿ ಬರುವುದಲ್ಲದೆ ತನ್ನ ಹಾಗೂ ಮನೆತನದ ಮಾನ ಮರ್ಯಾದೆಯಲ್ಲಾ ಹರಾಜಾಗದೇ ಇರದು. ಯಾವುದು ಸರಿ ಯಾವುದು ತಪ್ಪು ಎಂಬ ತೊಳಲಾಟದಲ್ಲೇ ಅವರು ನೀಡಿದ್ದ ವಿಳಾಸಕ್ಕೆ ಆಟೋ ಹತ್ತಿ ಹೊರಟಳು. ಮುಂದೆ ನಡೆದ್ದದ್ದೆಲ್ಲವೂ ನರಕ. ದಿನಗಳು ಉರುಳಿತು ಒಬ್ಬರ ಹಿಂದೆ ಒಬ್ಬರಂತೆ ಆಫೀಸಿನಲ್ಲಿದ್ದ ಎಲ್ಲರ ದಾಹ ತೀರಿಸುವ ‘ಕಾಮ’ದೇನುವಾದಳು. ತಿಂಗಳುಗಳೇ ಉರುಳಿದವು ಈಗವಳು ಎಲ್ಲರ ಪಾಲಿಗೆ ಹಳಸಿದ ತಂಗಳನ್ನ. ಎಲ್ಲರೂ ಟೀಕಿಸುವವರೇ , ಎಲ್ಲರೂ ಛೀಮಾರಿ ಹಾಕುವವರೇ.
ಈಗ ಅವಳ ಮನಸಲ್ಲಿ ಏಳುತ್ತಿದ್ದ ಪ್ರಶ್ನೆಯೊಂದೇ , ಈ ಮೈಮಾರಿಕೊಂಡು ಬದುಕುವ ಬದುಕು ಒಂದು ಬದುಕೇ..ತಾನು ಮೈಲಿಗೆಯಾದನೇ..!!??
ತನ್ನನ್ನೇ ತಾನು ಕೇಳಿಕೊಳ್ಳತೊಡಗಿದಳು. ತಾನು ಯಾರಿಗೂ ಮನಸಾರೆ ತನ್ನನ್ನು ತಾನು ಅರ್ಪಿಸಿಕೊಂಡವಳಲ್ಲ. ಅವರೇ ಇವಳ ಮೇಲೆ ಬಿದ್ದು ತಮ್ಮ ದೇಹ ತೃಷೆ ತೀರಿಸಿಕೊಂಡವರು. ಅದು ಅನಿವಾರ್ಯವಾಗಿತ್ತೋ ಇಲ್ಲವೋ ಈಗ ಯೋಚಿಸಿ ಫಲವಿಲ್ಲ.
ತಾನು ಇನ್ನೂ ಪಾವಿತ್ರ್ಯಳೆ..!! ತಿಳಿಯಾದ ಕೊಳವ ಕೆದಕಿ , ಕೆಸರುಹೊಂಡ ಎಂದು ಜರಿಯುವ ಈ ಸಮಾಜದ ಮೇಲೆ ಅಸಹ್ಯವಾಗಿ , ಎದ್ದು ಆಟೋ ಹತ್ತಿ ಮತ್ತೆ ಹೊರಟಳು.

-ಸತ್ಯ..,

Sanna kathe ...5

ರಾತ್ರಿಕಂಡ “ಹಗಲುಗನಸು”:

ನನ್ನೂರು ಶಿವಮೊಗ್ಗ . ಬೆಂಗಳೂರಿನಿಂದ ನನ್ನೂರಿಗೆ ಯಾವಾಗಲೂ ಬಸ್ಸಿನಲ್ಲೇ ನನ್ನ ಪ್ರಯಾಣ. ಅದೂ ರಾತ್ರಿ ಹೊತ್ತು ಮಾತ್ರ. ಯಾವ ಹುಡುಗನಾದರೂ ಬಸ್ಸಿನಲ್ಲಿ ಇಲ್ಲ ರೈಲಿನಲ್ಲಿ ಪ್ರಯಾಣ ಮಾಡೋಬೇಕಾದರೆ ಅದು ಒಬ್ಬನೇ , ದೇವರನ್ನ ಕೇಳಿಕೊಳ್ಳೋದು ಒಂದೇ ವರ. ಪಕ್ಕದಲ್ಲಿ ಒಂದು ಸುಂದರ ಹುಡುಗಿ ಬಂದು ಕುಳಿತುಕೊಳ್ಳಲಿ ಎಂದು. ನಾನೂ ಅದಕ್ಕೇನು ಹೊರತಲ್ಲ ಬಿಡಿ.
ಈ ಟಿನ್ ಫ್ಯಾಕ್ಟರಿ ಹತ್ತಿರದ ಟ್ರಾಫಿಕ್ ಎಂಬ ಮಹಾಸಾಗರ ದಾಟೋದು ಅಂದ್ರೆ ಅದೊಂತರ ಸಪ್ತ ಸಾಗರ ದಾಟಿದ ಹಾಗೇನೆ. ಅಂತು ಇಂತು ೨ ತಾಸುಗಳ ದೀರ್ಘ ಪ್ರಯಾಣದ ನಂತರ ಮೆಜೆಸ್ಟಿಕ್ ಎಂಬ ಮಾಯಾಲೋಕಕ್ಕೆ ಪ್ರವೇಶ ಪಡೆದಿದ್ದೆ. ಹಂಗು ಹಿಂಗು ಹಿಂದೆ ಮುಂದೆ ಅಲೆದು ಶಿವಮೊಗ್ಗ ಬಸ್ ಹುಡುಕಿ ಹತ್ತಿ ಕುತ್ಕೊಬೇಕಾದ್ರೆ ಸಾಕಾಗಿ ಹೋಗಿತ್ತು. ನಿದ್ದೆ ಮಂಪರು ಹತ್ತಿತ್ತು.
" ಹೀಗೆ ಮೊಬೈಲ್ ನಲ್ಲಿ ಚಾಟ್ ಮಾಡ್ತಾ ಕೂತೋನಿಗೆ ಪಕ್ಕದಲ್ಲಿ ಯಾರೋ ಬಂದು ಕೂತ ಹಾಗಾಯಿತು. ಯಾರೋ ಇರಬಹುದು ಅನ್ಕೊಂಡು ಸುಮ್ನೆ ನನ್ ಪಾಡಿಗ್ ನಾನು ಚಾಟ್ ಮಾಡ್ತಾ ಕೂತಿದ್ದೆ. ಪಕ್ಕದಲ್ಲಿ ಕುಳಿತವರು ಯಾರಿಗೋ ಕಾಲ್ ಮಾಡಿ ಮಾತಾಡ ತೊಡಗಿದರು. ಆ ಧ್ವನಿ ಹಾಗೆ ಕಿವಿ ಮೇಲೆ ಬಿದ್ದ ಕೂಡ್ಲೇ ಒಮ್ಮೆಲೇ ಕಿವಿ ನೆಟ್ಟಗಾಯಿತು. ಹೌದು ಯಾವುದೊ ಹುಡುಗಿಯ ಮಧುರವಾದ ಧ್ವನಿ. ಗಕ್ಕನೆ ತಿರುಗಿ ನೋಡಿದೆ. ಹೌದು ನಿಜವಾಗಿಯೂ ಹುಡುಗಿ. ಅವಳ ಮುಂಗುರುಳು ಮೊಗವನ್ನು ಮುಚ್ಚಿತ್ತು. ಹಾಗು ಹೀಗೂ ಓರೆಗಣ್ಣಿನಲ್ಲಿ ಅವಳನ್ನ ನೋಡೋ ಆಟ ನಡೆದೇ ಇತ್ತು. ಅಂತು ಕಾಲ್ ಮುಗಿದನಂತರ ತನ್ನ ಮುಂಗುರುಳ ಸರಿಮಾಡಿಕೊಂಡು ನನ್ನೆಡೆಗೆ ತಿರುಗಿ ಒಂದು ಸಣ್ಣ ಕಿರು ನಗೆ ಬೀರಿದಳು. ಒಮ್ಮೆಲೇ ಮೈಯಲ್ಲೆಲ್ಲ ವಿದ್ಯುತ್ ಹರಿದಂಗೆ ಆಯ್ತು. ನನಗೋ ಸ್ವರ್ಗಕ್ಕೇ ಮೂರೇ ಗೇಣು. ಆ ಯಮ ಬಂದು ಏನಾದರೂ ನಿನ್ ಪ್ರಾಣ ತಗೊಂಡು ಹೋಗಲೇನು ಅಂತ ಕೇಳಿದ್ದಿದ್ರೆ ಬಹುಶಃ ಹೂಂ ಅಂತಿದ್ನೇನೋ ಆ ಖುಷೀಲಿ...!!
ಅವಳೇ ಮಾತು ಶುರು ಮಾಡಿದಳು. ಊರು ಕೇರಿ ಹಿಂದೆ ಮುಂದೆ ಎಲ್ಲಾ ಹೇಳಿದಮೇಲೆ ನನ್ನ ಬಗ್ಗೇನೂ ಸ್ವಲ್ಪ ವಿಚಾರಿಸಿದಳು. ಲಡ್ಡು ಬಂದು ಬಾಯಿಗೆ ಬಿತ್ತ ಅನ್ನೋ ಜಾಹಿರಾತಿನಂತೆ ಒಂದಲ್ಲ , ಎರಡಲ್ಲ , ಒಂದೇ ಸಲಕ್ಕೆ ಹತ್ತು ಹನ್ನೆರಡು ಬಾಯೊಳಗೆ ತುರುಕಿದಂತಾಗಿತ್ತು.
ಹಾಗೂ ಹೀಗೂ ಬಸ್ ಹೊರಟು ನೆಲಮಂಗಲ ದಾಟೋವರೆಗೂ ಮಾತುಕತೆ ಸಾಂಗವಾಗೆ ಸಾಗಿತ್ತು. ಕೈ ಗಡಿಯಾರ ರಾತ್ರಿ 12 ತೋರಿಸ್ತಾ ಇತ್ತು. ಅವಳು ನಿದ್ರೆ ಬರ್ತಾ ಇದೆ ಮಲ್ಕೊತೀನಿ ಗುಡ್ ನೈಟ್ ಎಂದು ಮಲಗಿದಳು. ಇಬ್ಬರೇ ಕುಳಿತುಕೊಳ್ಳಬಹುದಾದ ಆಸನವಾದ್ದರಿಂದ ಕೈ ಕೈ ತಾಗುತಿತ್ತು. ಅವಳೋ ನಿದ್ರಾದೇವಿಗೆ ಸಂಪೂರ್ಣ ಅರ್ಪಿಸಿಕೊಂಡಿದ್ದಳು. ನಾನು ನಿದ್ರೆ ಬಾರದೆ ಹೊರಳಾಡಲೂ ಆಗದೆ ಮುಂದಿನ ಜೀವನದ ಬಗ್ಗೆ ರಾತ್ರಿಯಲ್ಲೇ 'ಹಗಲುಗನಸು' ಕಾಣುತ್ತಾ ಇದ್ದೆ. 6 ತಾಸಿನ ಪ್ರಯಾಣದಲ್ಲಿ ,ನಾನೊಬ್ಬನೇ ಪ್ರಣಯದ ಬೇಗೆಯಲ್ಲಿ, ೫೦ ವರ್ಷದ ಸಂಸಾರವನ್ನು ಮುಗಿಸಿದ್ದೆ -ಕನಸಿನಲ್ಲೇ.
ಅಂತೂ ಶಿವಮೊಗ್ಗ ಬಂದೇ ಬಿಟ್ಟಿತ್ತು. ಒಲ್ಲದ ಮನಸ್ಸಿಂದ ಬಸ್ಸಿಂದ ಇಳಿದವನೇ ಆಕೆಯ ಹೆಸರು ಹಾಗು ಫೋನ್ ನಂಬರ್ ಇಸ್ಕೊಬೇಕು ಅಂತ ಯೋಚಿಸುತ್ತ ರಾತ್ರಿ ಕಂಡ ಹಗಲುಗನಸನ್ನು ನನಸು ಮಾಡುವ ಹುನ್ನಾರಕ್ಕೆ ಅಡಿಪಾಯ ಹಾಕುತ್ತಿದ್ದೆ.
ತನ್ನ ಚೀಲದೊಳಕ್ಕೆ ಕೈ ಹಾಕಿ ಮೊಬೈಲ್ ತೆಗೆದವಳು ಕೈಯಲ್ಲಿ ಏನೋ ಕಾಗದ ಹಿಡಿದು ಹತ್ತಿರ ಬಂದಳು. ನನಗೀಗ ಇಮ್ಮಡಿ ಧೈರ್ಯ ಬಂದಿತ್ತು .ಬಹುಶಃ ಅವಳೂ ನನ್ನ ನಂಬರ್ ಕೇಳಬಹುದೇನೋ ಅಂತ. ಹತ್ತಿರ ಬಂದವಳೇ ಕೈಯಲ್ಲಿ ಕಾಗದವನ್ನಿಟ್ಟು ಹೇಳಿದಳು. ನಿಮ್ಮ ಪರಿಚಯ ಆಗಿದ್ದು ಒಳ್ಳೇದಾಯ್ತು . ಇನ್ನು 15 ದಿನಕ್ಕೆ ನನ್ನ ಮದುವೆ ನೀವು ಖಂಡಿತ ಬರಬೇಕು ಅಂತ ಹೇಳಿ ಮುಂಗುರುಳನ್ನೊಮ್ಮೆ ಸರಿಮಾಡಿಕೊಂಡು ನಗುತ್ತಾ ನಡೆದೇ ಬಿಟ್ಟಳು. ಎದೆಗೆ ಯಾರೋ ಈಟಿಯಿಂದ ಇರಿದ ಅನುಭವ".
ಹೋಗಬೇಡ ನಿಲ್ಲು ಏನೋ ಹೇಳಬೇಕು ಅಂತ ಒಂದೇ ಸಲ ಎಗರಿದವನಿಗೆ ತಾಕಿದ್ದು ಬಸ್ಸಿನ ಮೇಲ್ಭಾಗ. ಏನಾಗುತ್ತಿದೆ ಅಂತ ಅರ್ಥ ಮಾಡಿಕೊಳ್ಳೋವಷ್ಟರಲ್ಲಿ ಬಸ್ಸಿನ ಕ್ಲೀನರ್ ಬಂದು ಶಿವಮೊಗ್ಗ ಬಂದು ಆಗಲೇ 15 ನಿಮಿಷ ಆಗಿದೆ .ಬೇಗ ಇಳಿರಿ ಕ್ಲೀನ್ ಮಾಡಬೇಕು ಅಂತ ನನ್ನನ್ನೇ ಗುರಾಯಿಸುತ್ತಾ ನಿಂತಿದ್ದ..
ಸತ್ಯ..,
ಇದು ಕೇವಲ ಕಲ್ಪನೆ..
ಬಸ್ಸಿನಲ್ಲಿ ಹೋಗೋವಾಗ ಒಂದ್ಸಲನಾದ್ರೂ ಒಂದು ಹುಡುಗಿ ಬಂದು ಪಕ್ಕದಲ್ಲಿ ಕುತ್ಕೊಬಾರ್ದ ಅಂತ ಅನ್ನಿಸುತ್ತೆ.ಆದ್ರೆ ಇದುವರೆಗೂ ಆ ಭಾಗ್ಯ ಬಂದಿಲ್ಲ. ಬರಬಹುದೇನೋ ಅನ್ನೋ ನಿರೀಕ್ಷೆಯಲ್ಲಿ ಈ ಬರಹ..........

ಬದುಕಂದ್ರೆ....!!

ಬದುಕಂದ್ರೆ ಹಳಸಿದ ಚಿತ್ರಾನ್ನ::

ಇವನು ಕೆಲಸಕ್ಕೆ ಬಾರದ ಏನೇನೋ ಬರೆದು ತಲೆ ತಿಂತಾನೆ ಅಂತ ಬೈಕೊತಿದ್ದೀರ ...!!! ಏನ್ ಮಾಡೋದು ಬರಿಯೋ ಚಟ . ಬೇಡ ಅಂದ್ರು ಕೈ ಓಡುತ್ತೆ ಕೀ ಬೋರ್ಡ್ ಹತ್ರ.
ಇರ್ಲಿ ಈಗ ಹೇಳೋಕೆ ಹೊರ್ಟಿರೋದು ಬದುಕಿನ ಬಗ್ಗೆ . ಬದುಕಂದ್ರೆ ಹಳಸಿದ ಚಿತ್ರನ್ನಾದ್ ತರ.
ಯಾವುದೇ ತಿಂಡಿಯನ್ನೇ ತಗೋಳಿ ಅಷ್ಟು ಆಕರ್ಷಣೆ ಅನ್ಸೋದಿಲ್ಲ. ಆದರೆ ಚಿತ್ರಾನ್ನ ಮಾತ್ರ ಕಣ್ಣಿಗೆ ತುಂಬಾ ಆಕರ್ಷಣೀಯವಾಗಿ ಕಾಣುತ್ತೆ. ಬಹುಶಃ ಅದರ ಹಳದಿ ಬಣ್ಣ ಇರಬಹುದು. ಎಷ್ಟೋ ಸಿಟಿ ಜನರಿಗೆ ಇದೆ ಬೆಳಗ್ಗಿನ ಉಪಹಾರ. ಬ್ಯಾಚುಲರ್ಸ್ ಗಂತೂ ಕೆಲವೊಮ್ಮೆ ಇದೆ ಮೃಷ್ಟಾನ್ನ ಭೋಜನ ಮೂರು ಹೊತ್ತೂ. ಬೇರೆ ತಿಂಡಿ ಬರೋಲ್ಲ ಅಂತಾನೋ , ಮಾಡೋಕೆ ಸೋಮರಿತನಾನೋ ಅದು ಅವರವರಿಗೆ ಬಿಟ್ಟಿದ್ದು.
ಈ ಚಿತ್ರಾನ್ನಾನ ಒಂದು ಮಿಡ್ಲ್ ಕ್ಲಾಸ್ ಫ್ಯಾಮಿಲಿಗೆ ಹೋಲಿಸಿ ನೋಡೋಣ. ಈ ಮಧ್ಯಮ ವರ್ಗದ ಜನರ ಜೀವನ ಒಂತರ ಚಿತ್ರಾನ್ನಾನೆ. ನೋಡೋರ್ ಕಣ್ಣಿಗೆ ಮಾತ್ರ ಆಕರ್ಷಣೀಯವಾಗಿ ಕಾಣುತ್ತೆ. ಚಿತ್ರಾನ್ನದಲ್ಲಿನ ಅನ್ನ ನಮ್ಮ ಪೋಷಕರೆಂದುಕೊಳ್ಳೋಣ. ಅದಕ್ಕೆ ಹಾಕಿರೋ ಶೇಂಗ ನಮ್ ಸ್ನೇಹಿತರು, ಒಗ್ಗರಣೆ ಮಸಾಲೆ ಸಂಬಂಧಿಕರು, ಮೇಲೆ ಉದುರಿಸೋ ಕೊತ್ತುಂಬರಿ ಸೊಪ್ಪು ಈ ಪ್ರೀತಿ ಪ್ರೇಮ ಅಂದುಕೊಳ್ಳೋಣ.
ಈ ಚಿತ್ರಾನ್ನ ಚೆನ್ನಾಗಿರಲಿ ,ಹಾಳಾಗಿರಲಿ ಮೇಲ್ನೋಟಕ್ಕೆ ನೋಡಿದಾಕ್ಷಣ ಏನು ಗೊತ್ತಾಗೊಲ್ಲ. ಬೆಳಿಗ್ಗೆ ಮಾಡಿದ ಚಿತ್ರಾನ್ನ ಸಂಜೆ ಹೊತ್ತಿಗೆ ಹಳಸಿಹೋಗಿರುತ್ತೆ. ಮೇಲ್ನೋಟಕ್ಕೆ ಎಲ್ಲಾ ಚೆನ್ನಾಗಿಯೇ ಕಾಣುತ್ತೆ ಮೂಸಿ ನೋಡಿದಾಗಲೇ ಗೊತ್ತಾಗೋದು ಅದು ಹಳಿಸಿ ಹೋಗಿದೆ ಎಂದು. ಹಾಗೆ ಈ ಬದುಕು , ಬದುಕಿನ ಜೊತೆ ಹೆಣೆದಿರುವ ಸಂಬಂಧಗಳು ಕೂಡ. ನೋಡೋರ್ ಕಣ್ಣಿಗೆ ನಮ್ಮ ಜೀವನ ಕಲರ್ ಫುಲ್ ಚಿತ್ರಾನ್ನ . ಅದ್ರ ಅದ್ನ ಅನುಭವಿಸೋ ನಮಗೆ ಮಾತ್ರ ಗೊತ್ತಿರುತ್ತೆ ಅದರ ನಿಜವಾದ ಸ್ಥಿತಿ ಏನು ಅಂತ....
ಸತ್ಯ..,

Sanna kathe ...4

ಹಾಯಿ ದೋಣಿ:

ಎಲ್ಲರ ಮನೆಯಲ್ಲೂ ಮಗು ಹುಟ್ಟಿತೆಂದರೆ ಸಂಭ್ರಮ ಸಡಗರ. ಆದರೆ ಈ ಮನೆಯಲ್ಲಿ ಮಾತ್ರ ಕತ್ತಲನ್ನು ಕಿತ್ತು ತಿನ್ನುವಂತ ಮೌನ ಆವರಿಸಿತ್ತು. ಅಪ್ಪ ಅನಿಸಿಕೊಂಡವನು ಎಂದಿನಂತೆ ಕಂಠಪೂರ್ತಿ ಹೀರಿ ಬಂದಿದ್ದ. ಹೆತ್ತವಳಿಗೆ ತಾನೇಕೆ ಹೆತ್ತೆ ಅನ್ನುವುದೇ ಅರ್ಥವಾಗದ ಪರಿಸ್ಥಿತಿ.
ಅದೊಂದು ಕಡು ಬಡ ಕುಟುಂಬ. ಹೆಸರಿಗೆ ಬಡ ಕುಟುಂಬವಾದರೂ ಮನೆ ಯಜಮಾನ ಅನಿಸಿಕೊಂಡವನು ತನ್ನ ಹೊಟ್ಟೆಗೆ ಮಾತ್ರ ಏನು ಕಮ್ಮಿ ಮಾಡಿಕೊಳ್ಳುತ್ತಿರಲಿಲ್ಲ. ಚೆನ್ನಾಗೆ ದುಡಿಯುತ್ತಿದ್ದ . ದುಡಿದದ್ದೆಲ್ಲವನ್ನು ಎಣ್ಣೆ ಅಂಗಡಿಗೆ ಸುರಿಯುತ್ತಿದ್ದ. ಯಾರೋ ಸಂಬಂಧಿಕರು ಇವನಿಗೆ ಮದುವೆ ವಯಸ್ಸು ಆಯಿತೆಂದು ದೂರದ ನೆಂಟರ ಮನೆಯಿಂದ ಒಂದು ಹುಡುಗಿಯನ್ನ ಗೊತ್ತು ಮಾಡಿ ಮದುವೆ ಮಾಡಿದರು. ಮದುವೆಯೂ ಆಯಿತು. ಅದನ್ನು ಆತ ಬಯಸಿ ಆಗಿದ್ದಲ್ಲ. ಯಾರೋ ಒತ್ತಾಯಕ್ಕೆ ಆಗಿದ್ದು. ಆಕೆಯದು ಬಡ ಕುಟುಂಬ. ಮನೆಯವರ ಭಾರ ಕಡಿಮೆ ಮಾಡಿಕೊಳ್ಳಲು ಇವಳನ್ನು ಸಾಗಹಾಕಬೇಕಿತ್ತು. ಬಡತನದಲ್ಲೇ ಬೆಂದುಂಡ ಅವಳು ಸುಮ್ಮನೆ ಮನೆಯವರ ಮಾತಿಗೆ ಗೋಣಾಡಿಸಿದಳು.
ಬದುಕಿನ ಬಗ್ಗೆ ಅಲ್ಪ ಸ್ವಲ್ಪ ಕನಸನ್ನು ಕಂಡವಳಾದರೂ ಅದ್ಯಾವುದು ತನ್ನ ಜೀವನದಲ್ಲಿ ನಡೆಯದು ಎಂಬ ಸತ್ಯವನ್ನು ಅರಿತಿದ್ದಳು. ಗಂಡನೆಂಬ ಪ್ರಾಣಿ ತನ್ನ ದೇಹಭಾದೆ ತೀರಿಸಿಕೊಳ್ಳಲಷ್ಟೇ ಅವಳ ಬಳಿ ಬರುತ್ತಿದ್ದ. ಅವಳು ಯಾಂತ್ರಿಕವಾಗಿ ಸ್ಪಂದಿಸುತ್ತಿದ್ದಳೆ ವಿನಃ ಯಾವತ್ತೂ ಸಂಪೂರ್ಣವಾಗಿ ತನ್ನನ್ನ ತಾನು ಅರ್ಪಿಸಿಕೊಂಡವಳಲ್ಲ. ಹಾಗಂತ ತಪ್ಪು ಹಾದಿ ಹಿಡಿದವಳೂ ಅಲ್ಲ.
ಮದುವೆಯೇನೋ ಆಯ್ತು ಆದರೆ ಜೀವನ ನಡಿಬೇಕಲ್ಲ. ಗಂಡನಾದವನು ಒಂದು ನಯಾ ಪೈಸೇನು ಮನೆ ಖರ್ಚಿಗೆ ಕೊಡುವವನಲ್ಲ. ಬೇರೆ ಕೆಲಸ ಮಾಡಲು ಇವಳಿಗೆ ಓದು ಬರಹ ಒಂದು ಗೊತ್ತಿಲ್ಲ. ಆದರೂ ಜೀವನ ಸಾಗಬೇಕಲ್ಲ .ಬದುಕಲು ತಾನು ಕಂಡುಕೊಂಡ ದಾರಿ ಪೇಪರ್ ಆಯುವ ಕೆಲಸ. ಬೆಳಿಗ್ಗೆಯಿಂದ ಬೀದಿ ಬೀದಿ ಅಲೆದು ಪೇಪರ್ ಸಂಗ್ರಹಿಸಿ ಗುಜುರಿ ಅಂಗಡಿಗೆ ತೂಕಕ್ಕೆ ಹಾಕಿ ಬಂದ ಹಣದಿಂದ ಹೇಗೋ ಕಾಲ ಕಳೆಯುತಿದ್ದಳು. ಗಂಡ ಎಷ್ಟೇ ಕುಡುಕನಾದರೂ ಒಮ್ಮೆಯೂ ಇವಳ ದುಡಿಮೆಯ ಹಣಕ್ಕೆ ಕೈ ಹಾಕಿದವನಲ್ಲ.
ಈಗ ಮಗು ಬೆಳೆದು ನಡೆಯಲು ಶುರು ಮಾಡಿದೆ , ಅದರ ಹೊರೆಯನ್ನು ತಾನೆ ಹೊತ್ತಿದ್ದಾಳೆ. ಆ ಮಗು ಕೂಡ ಎಂದೂ ಹಠ ಹಿಡಿದು ತನಗೆ ಇದು ಬೇಕು ಅದು ಬೇಕು ಎಂದು ಕೂತಿರಲಿಲ್ಲ. ತನ್ನ ಪಾಡಿಗೆ ಬೀದಿ ಬದಿಯಲ್ಲಿ ಆಡಿಕೊಂಡು ಬೆಳೆಯುತ್ತಿತ್ತು. ನೀರಸ ಬದುಕಿನ ನೀರವತೆ ಅವಳ ಬದುಕಲ್ಲಿ ನೆಲೆ ನಿಂತಿತ್ತು.
ಒಮ್ಮೆ ಹೊರಗಡೆ ಜೋರಾಗಿ ಮಳೆ ಬೀಳುತ್ತಿತ್ತು. ಇರುವ ಗುಡಿಸಲೂ ಗಾಳಿಗೆ ಹಾರಿಹೋಗುತ್ತೇನೋ ಅನ್ನುವ ಹಾಗೆ. ಮಗು ಮಾತ್ರ ಯಾವುದೋ ಪೇಪರಿನ ಆಟಿಕೆಯನ್ನ ಹಿಡಿದು ಬಾಗಿಲಲ್ಲಿ ಆಡುತ್ತಿತ್ತು. ಯಾವುದೋ ಆಲೋಚನೆಯಲ್ಲಿದ್ದವಳು ವಾಸ್ತವಕ್ಕೆ ಮರಳಿ ಕುತೂಹಲದಿಂದ ಅದನ್ನೇ ನೋಡುತ್ತಾ ಕುಳಿತುಕೊಂಡಳು. ಮಗು ಕೈಯಲ್ಲಿ ದೋಣಿ ಮಾಡಿ ಮಳೆ ನೀರಿನಲ್ಲಿ ತೇಲಿ ಬಿಡುತ್ತಿತ್ತು. ಅದು ಹರಿವ ನೀರಿನ ಜೊತೆ ಸೇರಿ ದೂರದ ತನಕ ತೇಲಿಕೊಂಡು ಹೋಗಿ ಕಣ್ಮರೆಯಾಗುತ್ತಿತ್ತು. ಇದುವರೆಗೂ ಬದುಕೆಂದರೆ ಕತ್ತಲೆ ಎಂದು ತಿಳಿದಿದ್ದವಳ ಮನಸಲ್ಲಿ ಏನೋ ಒಂದು ಸಂಚಾರವಾದಂತಾಯಿತು. ಕುಳಿತ್ತಿದ್ದವಳಿಗೆ ಏನೋ ಹೊಳೆದಂತಾಗಿ ಮಗುವನ್ನು ಎತ್ತಿಕೊಂಡು ಮಳೆಯಲ್ಲೇ ನಡೆಯತೊಡಗಿದಳು .........

ಬರೆದವರು : ಸತ್ಯ

Sanna kathe ...3

ಒಂದು ಹೆಣ್ಣಿನ ಭಾವನೆಗಳು ಹೀಗೂ ಇರಬಹುದೆಂದು ಕಲ್ಪಿಸಿಕೊಂಡು ಬರೆದಿದ್ದು:

ಕಿಟಕಿಯ ಕಡೆ ಮುಖ ಮಾಡಿ ಕುಳಿತವಳಿಗೆ ವಾಸ್ತವದ ಪರಿವೆಯೇ ಇರಲಿಲ್ಲ. ಮನಸ್ಸು ದೂರದಲ್ಲೆಲ್ಲೋ ಅಸ್ಪಷ್ಟವಾಗಿ ಕಾಣುತ್ತಿದ್ದ ಬೋಳು ಗುಡ್ಡದಲ್ಲಿ ನೆಟ್ಟಿತ್ತು. ಮನಸ್ಸು ಏನನ್ನೋ ಬಯಸುತ್ತಿತ್ತು. ಆದರೂ ಏನೂ ಬೇಡ ಎಂಬ ಶೂನ್ಯ ಭಾವ ಆವರಿಸಿತ್ತು. ಹಿಂದಿನದ್ದೆಲ್ಲಾ ಮರೆಯಲೇ ನಾಳೆಗಳ ಬಗ್ಗೆ ಕನಸು ಕಾಣಲೇ ಅಥವಾ ಈ ಕ್ಷಣದ ಬಗ್ಗೆ ಯೋಚಿಸಲೇ ! ಎಲ್ಲಾ ಅಸ್ಪಷ್ಟ .
ಹೌದು ಎರಡು ವರ್ಷದ ಹಿಂದೆ ಅವನು ನನ್ನ ಬಾಳಿನಲ್ಲಿ ಪ್ರವೇಶ ಪಡೆದಿದ್ದ. ಬಯಸದೆ ಬಂದ ಭಾಗ್ಯ ಎಂದೇ ನಾನು ತಿಳಿದಿದ್ದೆ. ನಾನು ಕೆಲಸಕ್ಕೆ ಹೋಗುತ್ತಿದ್ದ ಆಫೀಸಿನಲ್ಲೇ ಅವನು ಕೆಲಸಕ್ಕೆ ಸೇರಿದ್ದ. ಆತನ ಸೀಟು ನನ್ನ ಸೀಟಿನ ಪಕ್ಕಾನೇ ಇತ್ತು. ನೋಡಲು ಸುಂದರನಲ್ಲದಿದ್ದರೂ ಅವನ ಮುಗುಳ್ನಗೆ ಯಾರನ್ನಾದರೂ ಮೋಡಿ ಮಾಡುವ ಹಾಗೆ ಇತ್ತು. ಮೊದಲ ದಿನವೇ ಹಾಯ್ ಎಂದು ಕೈ ಕುಲುಕುತ್ತ ತನ್ನ ಪರಿಚಯ ಮಾಡಿಕೊಂಡಿದ್ದ. ದಿನಾ ಬೆಳಿಗ್ಗೆ ಬಂದವನೇ ಮುಂಜಾನೆಯ ಶುಭಾಶಯ ಹೇಳುತ್ತಿದ್ದ. ಊಟಕ್ಕೆ ನಾನು ಬರುವುದಿಲ್ಲ ಅಂತ ಗೊತ್ತಿದ್ದರೂ ಪ್ರತಿದಿನವೂ ತಪ್ಪದೆ ಕರೆಯುತ್ತಿದ್ದ.
ನಾನಾಯ್ತು ನನ್ನ ಕೆಲಸವಾಯ್ತು ಅಂತ ಇದ್ದ ನಾನು ಆಫೀಸಿನಲ್ಲಿ ಯಾರನ್ನು ಅಷ್ಟು ಹಚ್ಚಿಕೊಂಡಿರಲಿಲ್ಲ. ಕೇವಲ ಸಹೋದ್ಯೋಗಿ ತರಾನೆ ವರ್ತಿಸುತ್ತಿದ್ದೆ. ಎಲ್ಲರೂ ಬಿಡುವಿನ ವೇಳೆಯಲ್ಲಿ ಜೊತೆಗೂಡಿ ಹರಟೆ ಹೊಡೆಯುತ್ತಾ ಕುಳಿತಿದ್ದರೆ ನಾನು ಮಾತ್ರ ಕಂಪ್ಯೂಟರಿನ ಮುಂದೆಯೋ ಇಲ್ಲವೇ ಯಾವುದಾದರು ಕಾದಂಬರಿಯನ್ನೊ ಓದುತ್ತ ಕುಳಿತಿರುತ್ತಿದ್ದೆ. ಪಕ್ಕದಲ್ಲೇ ಕುಳಿತಿರುತ್ತಿದ್ದ ಅವನು ಏನಾದರು ಕೇಳಿದರೆ ,ಕೇಳಿದ್ದಕ್ಕಷ್ಟೇ ಉತ್ತರಿಸಿ ಸುಮ್ಮನಾಗುತ್ತಿದ್ದೆ. ಯಾವತ್ತೂ ನಾನಾಗಿಯೇ ಏನನ್ನು ಅವನ ಬಳಿ ಕೇಳಿರಲಿಲ್ಲ. ಕೇಳುವಂತಹ ಸನ್ನಿವೇಶವು ಬಂದಿರಲಿಲ್ಲ. ನಮ್ಮಿಬ್ಬರ ನಡುವೆ ಹೇಳುವಂತಹ ಪರಿಚಯವೂ ಇರಲ್ಲಿಲ್ಲ. ಸ್ನೇಹವೂ ಇರಲ್ಲಿಲ್ಲ. ಹೀಗೆ ದಿನಗಳು ಸಾಗುತ್ತಿದ್ದವು. ನನಗೆ ಅರಿವಿಲ್ಲದಂತೆ ಅವನ ಬಗ್ಗೆ ಯೋಚಿಸಲು ಶುರುಮಾಡಿದ್ದೆ. ಅದಕ್ಕೆ ಕಾರಣಗಳು ಇರಲಿಲ್ಲ. ಆದರೂ ಜೀವನದಲ್ಲಿ ಮೊದಲ ಬಾರಿಗೆ ಒಬ್ಬ ಹುಡುಗನ ಬಗೆಗೆ ಯೋಚಿಸಿದ್ದೆ. ಯಾಕೆ ಅಂತ ನನ್ನನ್ನೇ ನಾನು ಪ್ರಶ್ನಿಸಿಕೊಂಡರೆ. ಅದಕ್ಕೆ ಉತ್ತರ ನನ್ನ ಬಳಿ ಇರಲಿಲ್ಲ.
ವಯಸ್ಸು 28 ದಾಟಿತ್ತು. ಹದಿಹರೆಯದಲ್ಲೂ ಎಂದೂ ಈ ರೀತಿ ಭಾವನೆಗಳು ಬಂದಿರಲಿಲ್ಲ. ನನ್ನ ಸ್ನೇಹಿತೆಯರು ಅವರ ಗೆಳೆಯರ ಬಗ್ಗೆ ಹೇಳುವಾಗಾಗಲಿ , ಅವರನ್ನ ನೋಡಿದಾಗಾಗಲಿ ನಾನೆಂದು ನನಗೊಬ್ಬ ಗೆಳೆಯ ಬೇಕು ಎಂದು ಎಣಿಸಿರಲಿಲ್ಲ. ನಾನಾಯ್ತು ನನ್ನ ಕೆಲಸವಾಯ್ತು , ನನ್ನ ಓದಾಯ್ತು. ಎಂದೂ ನಾನೊಬ್ಬಳು ಒಂಟಿ ಎಂಬ ಭಾವನೆ ಬಂದಿರಲೇ ಇಲ್ಲ. ಮನಸ್ಸು ಜಡವಾಗಿತ್ತೋ ಅಥವಾ ಹುಟ್ಟಿ ಬೆಳೆದ ವಾತಾವರಣ ನನ್ನನ್ನು ಜಡತೆಯೆಡೆಗೆ ನೂಕಿತ್ತೋ ಗೊತ್ತಿಲ್ಲ.
ಅವನು ನನ್ನ ಜೊತೆಗೆ ಕೆಲಸ ಮಾಡುತ್ತ ಎರಡು ವರ್ಷವೇ ಕಳೆದಿದೆ. ನಾನೆಂದೂ ನನ್ನ ಭಾವನೆಗಳನ್ನ ಅವನ ಬಳಿ ಹೇಳಿಕೊಳ್ಳಲೇ ಇಲ್ಲ. ಬೇರೆ ಯಾರ ಜೊತೆಯೂ ಕೂಡ.
ನಿನ್ನೆ ಅವನು ಖುಷಿಯಿಂದ ಎಲ್ಲರಿಗೂ ಸಿಹಿ ಹಂಚಿ ತನಗೆ ಮದುವೆ ನಿಶ್ಚಯವಾಗಿದೆ ಅಂದಾಗ , ಅಭಿನಂದನೆ ತಿಳಿಸಬೇಕೋ ಅಥವಾ ನನ್ನ ಭಾವನೆಗಳನ್ನ ಅವನ ಮುಂದೆ ಹೇಳಬೇಕೋ ತಿಳಿಯದೆ ಕೇವಲ ಥ್ಯಾಂಕ್ಸ್ ಮಾತ್ರ ಹೇಳಿದ್ದೆ. ಅವನು ಕೊಟ್ಟ ಸಿಹಿಯನ್ನೂ ತಿನ್ನದೇ ಹಾಗೆ ಮೇಜಿನ ಮೇಲಿಟ್ಟು ಕೆಲಸ ಮುಗಿಸಿ ಸುಮ್ಮನೇ ಮನೆಗೆ ಬಂದಿದ್ದೆ ಎಂದಿನಂತೆ.
ಈಗ ಬೆಳಿಗ್ಗೆ ಎದ್ದಾಗಿನಿಂದ ಏನನ್ನೋ ಕಳೆದುಕೊಳ್ಳುತ್ತಿರುವ ಅನುಭವ. ಏನು..!! ಗೊತ್ತಿಲ್ಲ...
ಗಡಿಯಾರ ತನ್ನ ಪಾಡಿಗೆ ತಾನು ಓಡುತ್ತಿದೆ. ಆಫೀಸಿಗೆ ತಡವಾಗುವ ಅರಿವಾಗಿ ಕುಳಿತಲ್ಲಿಂದ ಮೇಲೆದ್ದೆ ...............

ಬರೆದವರು: ಸತ್ಯ..,

Haleya barahagalu ... (10)

(ಅಲೆಗಳಿಗೆ ದಡವ ಸೇರುವ ತವಕ..ಒಮ್ಮೊಮ್ಮೆ ಅಲೆಯಾಗಿ ಒಮ್ಮೊಮ್ಮೆ ತೆರೆಯಾಗಿ ಮತ್ತೊಮ್ಮೆ ಸುನಾಮಿಯಾಗಿ..!! ಏನೇ ಮಾಡಿದರೂ ದಡವ ಸೇರುವ ಅಲೆಗಳ ಆಸೆ ಎಂದಿಗೂ ಮರೀಚಿಕೆ...!??
ಎಷ್ಟೇ ಆಸೆಯಿಂದ ಉಕ್ಕಿ ಬಂದರೂ ಕೊನೆಗೆ ಕಡಲ ಒಡಲಾಳದ ಪ್ರೀತಿಗೆ ಸೋತು ಮರಳಿ ಮಡಿಲ ಸೇರುವುದು. ಪ್ರತಿದಿನ ಇದ ಕಾಣುವ ಸೂರ್ಯ - ಚಂದ್ರರು ಕೇವಲ ಮೂಕ ಪ್ರೇಕ್ಷಕರು...)
ಹೊತ್ತು ಹೊತ್ತಾದರೂ ತನ್ನಾಟ ಇನ್ನೂ ಮುಗಿಯದು..
ಒಡಲ ಒತ್ತಿ ಎದೆಯು ಉಕ್ಕಿ ದಡವ ಸೇರ ಬರುವುದು..
ಕೈಯ ಚಾಚಿ ದಡವ ಬಾಚಿ ನಿಲುವುದು..
ಕೈಯು ಬತ್ತಿ ಮೌನವಾಗಿ ಮರಳಿ ಕಡಲ ಸೇರ್ವುದು..
ಮತ್ತೆ ಮತ್ತೆ ಪ್ರೀತಿ ಉಕ್ಕಿ ಬಿಕ್ಕಿ ಬಿಕ್ಕಿ ಅಳುವುದು..
ಅಳುವ ಕಂಡ ಬಾನು ತಾನು ಜೊತೆಗೆ ದನಿಯಾಗುವುದು..
ಕಳ್ಳನಂತೆ ಮುಗಿಲ ಹಿಂದೆ ಚಂದ್ರ ತಾನು ಅಡಗುವನು..
ದೂರದಿಂದ ಮರುಕ ತೋರಿ ರವಿಯು ತೆರೆಯ ಮರೆಗೆ ಸರಿವನು..
ಮಾತ ಮುರಿದು ಮೌನ ತಳೆದು ಅಲೆಯು ಮರಳಿ ಕಡಲ ಸೇರ್ವುದು..
ಕೊನೆಗೂ ಏಕಾಂತದ ಕರಿ ಛಾಯೆ ಕಡಲನೆಂದು ಬಿಡದು..

=====================================================

Dedicated to my mom and all women. :

ಹೆತ್ತವಳಿವಳು ಹೊತ್ತವಳಿವಳು
ಕೈತುತ್ತು ಕೊಟ್ಟವಳಿವಳು..
ಬದುಕು ಬರೆದವಳಿವಳು ಕನಸ ತೊರೆದವಳಿವಳು
ಕೈಹಿಡಿದು ನಡೆಸಿದವಳಿವಳು..
ತಿದ್ದಿ ಬುದ್ದಿ ಹೇಳಿದವಳಿವಳು ವಿದ್ಯೆ ಕಲಿಸಿದವಳಿವಳು
ಕೈ ಹಿಡಿದು ಬರೆಸಿದವಳಿವಳು..
ನೋವನುಂಡವಳಿವಳು ತನುವ ತೇಯ್ದವಳಿವಳು
ನೋವ ಮರೆಸಿ ನಗುವ ತರಿಸಿದಳಿವಳು..
ಆಸೆ ಪಡದವಳಿವಳು ಪದವಿ ಕೇಳದವಳಿವಳು
ನಿಷ್ಕಲ್ಮಶ ಪ್ರೀತಿ ತೋರಿದವಳಿವಳು..
ಕತ್ತಲಲ್ಲಿ ಕೊರಗಿದಳಿವಳು ಬೆಳಕ ತೋರಿದಳಿವಳು
ಎಡವಿ ಬಿದ್ದಾಗ ಕೈಹಿಡಿದು ಮೇಲೆತ್ತಿದವಳಿವಳು..
ಬೈದರೂ ಬೈಸಿಕೊಂಡವಳಿವಳು ಮರು ಮಾತು ಆಡದವಳಿವಳು
ಸೆರಗಿನಲ್ಲೇ ಕಣ್ಣೀರ ಒರೆಸಿಕೊಂಡವಳಿವಳು..
ಹೊಗಳಿಕೆಗೆ ಉಬ್ಬದವಳಿವಳು ತೆಗಳಿಕೆಗೆ ಕುಗ್ಗದವಳಿವಳು
ಹಗ್ಗದ ಮೇಲಿನ ಜೀವನ ನಡೆಸಿದವಳಿವಳು..
ದೇವರನ್ನ ತೋರಿಸಿದವಳಿವಳು ದೇವರಿಗಿಂತ ದೊಡ್ಡವಳಿವಳು
ಅವಳೇ ಎಲ್ಲರ ತಾಯಿಯೆನಿಸಿಕೊಂಡವಳು..

Haleya barahagalu ... (9)

ನಾನೊಬ್ಬ ಬಡವ:

ಓದು ಬರಹ ಬರದವರು...
ಬದುಕ ಹೆಣೆಯಲು ಹೆಣಗುವರು...
ಹೆಣಕ್ಕಿಂತ ಕೀಳಾಗಿ ಕಂಡರೂ...
ಹೆದರಿಕೆಯ ಮೆಟ್ಟಿ ನಿಂತವರು...


ಮೇಲ್ಛಾವಣಿಯೇ ಇಲ್ಲದ ಮನೆಯಲ್ಲಿ ದಿನಕಳೆಯುವರು...
ಹೊದೆಯಲು ಹೊದಿಕೆ ಇಲ್ಲದಿದ್ದರೂ ಗೊರಕೆ ಹೊಡೆಯುವರು...
ಒಪ್ಪೊತ್ತಿನ ಊಟವಿಲ್ಲದಿದ್ದರೂ ಧೃತಿಗೆಡರು...
ಆದರೂ ಮಾನ ಮರ್ಯಾದೆಗಂಜಿ ಬದುಕುವರು...

ಕಷ್ಟ ಎಂದರೆ ಕೈ ನೀಡುವರು...
ಹೆಗಲಿಗೆ ಹೆಗಲು ಕೊಟ್ಟು ಜೀವಿಸುವರು...
ಯಾರದೋ ಕಣ್ಣೀರಿಗೆ ತಾವಾಗುವರು...
ತಮ್ಮದಲ್ಲದ ನೋವಿಗೂ ಮರುಗುವರು...
============================================
ನನ್ನದಲ್ಲದ ನಾಳೆ...
ನಾಳೆಗಾಗಿ ನಾನು...
ನನ್ನದಲ್ಲದ ನೆನ್ನೆ...
ನೆನ್ನೆಯಿಂದ ನಾನು...
ನನ್ನದಲ್ಲದ ಇಂದು...
ಇಂದಿಗಾಗಿ ನಾನು...
ನೆನ್ನೆ ನಾಳೆಗಳ ನಡುವೆ
ಇಂದ ಮರೆತೆನು...
ಹಿಂದಿನದ್ದನ್ನು ಯೋಚಿಸುತ್ತ
ಹಿಂದೆ ಉಳಿದೆನು....

==========================================
ಸಾಯುವಾಗ ಒಂದು ಹನಿ ನೀರ ಕೊಡದವರು..
ಸತ್ತಮೇಲೆ ಅಸ್ಥಿಯ ಗಂಗೇಲಿ ತೇಲಿ ಬಿಟ್ಟರು...
ಹಸಿದಾಗ ಒಂದು ಹಿಡಿ ಅನ್ನ ಹಾಕದವರು..
ಸತ್ತಮೇಲೆ ಪಿಂಡವ ಕಾಗೆಗೆ ಎಸೆದರು...
ಬದುಕಿದ್ದಾಗ ಮಾತಿನಿಂದಲೇ ಚುಚ್ಚಿದವರು..
ಸತ್ತಮೇಲೆ ಫೋಟೊಗೆ ಹೂವಿನ ಹಾರ ಹಾಕಿದರು...
ಎದುರಿದ್ದಾಗ ಪಾಪಿಷ್ಟ ಸಾಯಿ ಎಂದವರು..
ಸತ್ತಮೇಲೆ ಪುಣ್ಯಾತ್ಮ ಬೇಗ ಹೋಗ್ಬಿಟ್ಟ ಎಂದರು....
ಈ ಪಾಪಿ ಜನರು..

==========================================
ಮನದ ಪರದೆಯ ಮೇಲೆ ಮೂಡಿದ ಸಾಲುಗಳೆಲ್ಲವೂ
ನಿನ್ನ ನೆನಪುಗಳ ಪರಿಧಿಯೊಳಗೆ ಗಿರಗಿಟ್ಲೆ ಹೊಡೆಯುತ್ತಿವೆ...
ಕಾಡಿ-ಬೇಡಿ ಅತ್ತು-ಕೂಗಿ ಕರೆಯಬೇಕೆಂಬ ಮನದ ಹಂಬಲವೂ
ನನ್ನ ಅಹಂಮಿನ ಕೋಟೆಯಲಿ ಸತ್ತು ಗೋರಿ ಸೇರಿವೆ.....
sathya.
  

Haleya barahagalu ... (8)

ಪೆನ್ನು-ಪೇಪರ್..

ನಾನೇಕೆ ಹೀಗೆ ಬರೆಯುತ್ತೇನೆ
ಹುಚ್ಚನಂತೆ..
ಅನಿಸಿದ್ದೆಲ್ಲವ ಗೀಚುವ
ಮೂಢನಂತೆ..
ಅರ್ಥವಿಲ್ಲದ ಅದೆಷ್ಟೋ
ಬರಹಗಳು..
ನನಗೆ ಅರ್ಥವಾಗದ
ಭಾವನೆಗಳು..
ಪೆನ್ನು ಪೇಪರ್ ಹಿಡಿದು
ಬರೆಯಲ್ಲಿಲ್ಲ..
ಪದಗಳಿಗಾಗಿ
ತಡಕಾಡಿದೆನಲ್ಲಾ..
ಕೇಳಿದ ನೋಡಿದ ಓದಿದ
ವಿಚಾರಗಳು..
ಕಾಡಿದ ಕೇಳದ ಹಾಗೆಯೆ ಉಳಿದ
ಪ್ರಶ್ನೆಗಳು..
ಬದುಕಿನ ಬಗೆಗಿನ
ದ್ವಂದ್ವಗಳು..
ಹಿರಿಯರ ದೇವರ
ತತ್ವಗಳು..
ಪುಸ್ತಕದಲ್ಲಿ
ಓದಿದವುಗಳು..
ಮಸ್ತಕದಲ್ಲಿ
ಮೂಡಿದವುಗಳು..
ಎಲ್ಲವೂ ಬೆರೆತು ಕಲಬೆರಕೆಯ ಗೂಡಾಗಿದೆ...
ಯಾವಾಗಲೂ ಗುಯ್ ಗುಡುವ ಗೊಂದಲದ ಹಾಡಾಗಿದೆ...

-ಸತ್ಯ..,

Haleya barahagalu ... (7)

ಎತ್ತ ಸಾಗಿದೆ ನಮ್ಮ ಪೀಳಿಗೆ..
ಹಿಂದೊಮ್ಮೆ ಹಸಿದ ವ್ಯಾಘ್ರಗಳ ಕಂಡು ಹೆದರುತ್ತಿದ್ದೆವು..
ಅವನ್ನು ಕೊಂದು ತಿಂದು ತೇಗಿದ್ದಾಯ್ತು..
ಹಾವ ಕಂಡು ಭಯಬೀಳುತ್ತಿದ್ದೆವು..
ಅವನ್ನೂ ಹೊಸಕಿ ಮಣ್ಣು ಮಾಡಿದ್ದಾಯ್ತು..
ಬೀದಿ ನಾಯಿಗಳಿಗೆ ಹೆದರಿ ಮನೆಸೇರಿಕೊಳ್ಳುತ್ತಿದ್ದೆವು...
ಅವನ್ನೂ ಲಾರೀಲಿ ತುಂಬಿಸಿ ಹೊತ್ತೊಯ್ದಿದ್ದಾಯ್ತು..
ಉಳಿದಿದ್ದಾದರೂ ಏನಿನ್ನು ಭಯಬೀಳಲಿಕ್ಕೆ...!!
ಅದಕ್ಕೆ ಮಾನವರೆ ಎತ್ತುತ್ತಿರುವರಲ್ಲಾ ನಾನ ಅವತಾರವ..
ಹಸಿದ ಹೆಬ್ಬುಲಿಯಂತೆ ಎಗರಿ ಅತ್ಯಾಚಾರವೆಸಗುತ್ತಿರುವರು....
ಕಾಳ ಸರ್ಪದಂತೆ ತನಗಾಗದವರ ವಿರುದ್ದ ಸೇಡು ತೀರಿಸಿಕೊಳ್ಳಲು ಕಾಯುತಿರುವರು...
ಹುಚ್ಚು ನಾಯಿಯಂತೆ ಸಿಕ್ಕ ಸಿಕ್ಕವರನ್ನೆಲ್ಲಾ ಮಚ್ಚು ಲಾಂಗುಗಳಿಂದ ಕೊಚ್ಚುತಿರುವರು...
ಇದೇನಾ ನಾಗರೀಕ ಸಮಾಜ...
ಇಲ್ಲಾ ಮತ್ತೇ ಆದಿಮಾನವನಾಗುವ ಬಯಕೆಯಾ....!!!???

===================================================
ಬದಲಾವಣೆ ಜಗದ ನಿಯಮ...
ಬದಲಾಯಿಸೋದು ಜನರ ನಿಯಮ...
ಬದಲಾವಣೆಯಾ ಒಪ್ಪದೇ ಇರೋದು ಜಡತೆಯ ನಿಯಮ...

==================================================
ಕನಸಲ್ಲ...ಕಲ್ಪನೆಯಲ್ಲ...
ಕರುಣೆಯಿಲ್ಲ ...ಕಾರಣವಿಲ್ಲ...
ಕಾದಿರಲಿಲ್ಲ...ಕಾಡಿರಲಿಲ್ಲ...
ಕರೆದಿರಲಿಲ್ಲ...ಕಾಯಿಸಲಿಲ್ಲ...
ಕೇಳಲಿಲ್ಲ...ಕಿತ್ತುಕೊಳ್ಳಲಿಲ್ಲ...
ಕಿವುಡಲ್ಲ...ಕಿವಿಗೊಡಲಿಲ್ಲ...
ಕುರುಡಲ್ಲ...ಕಣ್ತೆರೆದು ನೋಡಲಿಲ್ಲ...
ಕಪ್ಪಲ್ಲ...ಕತ್ತಲೆಯಲ್ಲ...
ಕೊನೆಗೂ ...ಕೈಗೆಟುಕಲಿಲ್ಲ....

=================================================
ನಾನೊಬ್ಬ ಬಡವ:

ಓದು ಬರಹ ಬರದವರು...
ಬದುಕ ಹೆಣೆಯಲು ಹೆಣಗುವರು...
ಹೆಣಕ್ಕಿಂತ ಕೀಳಾಗಿ ಕಂಡರೂ...
ಹೆದರಿಕೆಯ ಮೆಟ್ಟಿ ನಿಂತವರು...

ಮೇಲ್ಛಾವಣಿಯೇ ಇಲ್ಲದ ಮನೆಯಲ್ಲಿ ದಿನಕಳೆಯುವರು...
ಹೊದೆಯಲು ಹೊದಿಕೆ ಇಲ್ಲದಿದ್ದರೂ ಗೊರಕೆ ಹೊಡೆಯುವರು...
ಒಪ್ಪೊತ್ತಿನ ಊಟವಿಲ್ಲದಿದ್ದರೂ ಧೃತಿಗೆಡರು...
ಆದರೂ ಮಾನ ಮರ್ಯಾದೆಗಂಜಿ ಬದುಕುವರು...
ಕಷ್ಟ ಎಂದರೆ ಕೈ ನೀಡುವರು...
ಹೆಗಲಿಗೆ ಹೆಗಲು ಕೊಟ್ಟು ಜೀವಿಸುವರು...
ಯಾರದೋ ಕಣ್ಣೀರಿಗೆ ತಾವಾಗುವರು...
ತಮ್ಮದಲ್ಲದ ನೋವಿಗೂ ಮರುಗುವರು...
 

Haleya barahagalu ... (6)

ನಿತ್ಯ - ನಿನ್ನದೇ - ನಿನಾದ
ನಿರ್ಲಿಪ್ತ - ನಿನ್ನೆನೆದು - ನಿರಂತರ
ನಿಟ್ಟುಸಿರು - ನಿನಗಾಗಿ - ನಿನ್ನೊಲವಿಗಾಗಿ
ನಿಷ್ಕಲ್ಮಶ - ನಿರ್ವಿಕಾರ - ನಿವೇದನ
ನಿರೀಕ್ಷಿತ - ನಿನ್ನುತ್ತರ - ನಿರುತ್ತರ
ನಿರಾಧಾರ - ನೀದೂರ - ನಿನ್ ನಿರ್ಧಾರ

=====================================
ಹುಡುಕಿ ಬಂದೆ ನಾ - ಓ ಹುಡುಗಿ..,
ಇದೇನು ಹುಡುಗಾಟವಲ್ಲ - ಕೇಳೆನ್ನ ಬೆಡಗಿ..,
ಕಳೆದು ಹೋಗಿರುವೆ ನಾ ನಿನ - ಪ್ರೀತಿಯಲ್ಲೆಲ್ಲೋ ಹುದುಗಿ..,
ಉಸಿರಾಡುತಿರುವೆ ಕೇವಲ - ನಿನ್ನಯ ಸಲುವಾಗಿ..,

ಈ ರೀತಿ ಮಾತುಗಳು ನಿನಗೇನೂ ಹೊಸತಲ್ಲ..,
ಯಾರೇ ನಿನ್ನ ನೋಡಿದರೂ ಹೀಗೆ ಅನಿಸಬಹುದಲ್ಲ..,
ನಾನೇನು ಬೇರೆಯವರಂತಲ್ಲ ಅಂತೇನೂ ಹೇಳುತ್ತಿಲ್ಲ..,
ಆದರೂ ಒಂದು ಮಾತು.. ನಾನು ಎಲ್ಲರಂತಲ್ಲ..,

ಮೊದಲು ನಿನ್ನ ನಿರ್ಧಾರ ತಿಳಿಸು..,
ಆಮೇಲೆ ಬೇಕಾದರೆ ಎಷ್ಟಾದರೂ ಕಾಯಿಸು..,
ಇನ್ನು ಕಾಯಲಾರದು ಈ ನನ್ನ ಮನಸು..,
ಅರ್ಥ ಮಾಡಿಕೋ ನನ್ನ ಮನದಾಳದ ಹಪ-ಹಪಿಸು.........,
======================================
ಎಲ್ಲರಿಗೂ ಇದೆ ಇಲ್ಲಿ ಆಹ್ವಾನ ...
ಮಳೆ ಬಂದರಂತೂ ಪೂರ್ತಿ ಅಧ್ವಾನ...
ಮಳೇಲಿ ಕೊಚ್ಚಿಕೊಂಡು ಹೋದರೂ ಹೇಳೋರಿಲ್ಲ ಸಾಂತ್ವನ....
ಇದುವೇ ಬೆಂಗಳೂರು ಜೀವನ...
======================================
ಹೀಗೊಂದು ತ್ರಿಕೋನ ಪ್ರೇಮಕಥೆ:

ಮೋಡಕ್ಕೂ ಚಂದ್ರನಿಗೂ ದಿನವೂ ಕಾದಾಟ...
ತನ್ನ ಪ್ರೇಯಸಿಯ ನೋಡುವಾಸೆ ಚಂದ್ರನಿಗೆ...
ತಾನೂ (ಮೋಡ) ಮರುಳಾಗಿದ್ದಾನೆ ಆ ವಿಶಾಲ ಸೌಂದರ್ಯಕ್ಕೆ...
ತಾನು ಎಷ್ಟೇ ಅಡ್ಡ ಬಂದರೂ ಅವ ಇಣುಕಿ ನೋಡುವ...
ಅವನೋ -ಕಾರ್ಮುಗಿಲ ಕಾರಿ ಮತ್ತೆ ಅಡ್ಡ ಬರುವ...
ಚಂದಿರನ ಹೊಟ್ಟೆ ಉರಿಸಲೆಂದೇ ಇವ ಪ್ರೀತಿಯ ಮಳೆ ಸುರಿಸುವ...
ಅವರಿಬ್ಬರ ಸರಸ ನೋಡಲಾಗದೆ ತಾನು ತೆರೆ ಮರೆಗೆ ಸರಿಯುವ...
ಮತ್ತೆ ಹುಣ್ಣಿಮೆ ಬಂತಂದರೆ ಸಾಕು ಉಕ್ಕುವಳು ಇವಳು -ಅವನ ಸೇರಲು...
ಆದದ್ದೆಲ್ಲವ ಮರೆತು ತಾನು ಬರುವನು ಸುರಿಸುತ ನಗುವಿನ ಹೊನಲು...

======================================
ಸರತಿಯಲ್ಲಿ ಹಚ್ಚಿಟ್ಟ ದೀಪಗಳಂತೆ..
ಸಾಲು ಸಾಲು ನೆನಪುಗಳು ಮೂಡಿವೆ...
ಕನಸುಗಳೆಲ್ಲಾ ಮಳೆಹುಳುವಿನಂತೆ..
ದೀಪದಾ ಉರಿಗೆ ಸಿಕ್ಕಿ ಸತ್ತುಹೋಗಿವೆ ....

 

Haleya barahagalu ... (5)

ಮೂಡದಿರಲಿ ಇನ್ನೆಂದೂ ಆ ಹಳೆಯ ನೆನಪುಗಳು..
ಹೊಳೆದದ್ದೆಲ್ಲಾ ಚಿನ್ನವೆಂದು ನಂಬಿದ್ದ ದಿನಗಳು..
ಕಡಲ ಕಿನಾರೆಯಲ್ಲಿ ಕೈ ಹಿಡಿದು ನಡೆದ ಕ್ಷಣಗಳು..
ಹಸಿ ಮರಳರಾಶಿಯ ಮೇಲೆ ಬರೆದ ನಮ್ಮಿಬ್ಬರ ಹೆಸರುಗಳು..
ಅದ ಮುತ್ತಿಕ್ಕಲು ಹುಚ್ಚೆದ್ದು ಬರುತ್ತಿದ್ದ ಅಲೆಗಳು..
ತಡೆಯದೆ ಹೋದೆ ಅಲೆಗಳ ಹುಚ್ಚಾಟಗಳು..
ವ್ಯತ್ಯಾಸವೆನಿಲ್ಲಾ ಅಲೆಗಳಿಗೂ ಈ ಹುಚ್ಚು ಮನಸಿನ ಭಾವನೆಗಳಿಗೂ..
ಕೊನೆಗೊಮ್ಮೆ ಸೇರಲೇಬೇಕು ನೆನಪಿನಾಳವ...
ಸೇರಲಾಗದೆ - ಪ್ರೀತಿಯ ತೀರವ...

============================================
ಸಾಲುಗಳೇ ಇರದ ಪದ್ಯಕ್ಕೊಂದು ಶೀರ್ಷಿಕೆ ಇಡಬೇಕಾಗಿದೆ ...
ನೀನಿರದ ಈ ಬಾಳಿಗೊಂದು ಫುಲ್ ಸ್ಟಾಪ್ ಇಡಬೇಕಾಗಿದೆ...
ಕಳೆದುಹೋದ ಕ್ಷಣಗಳನ್ನೆಲ್ಲಾ ಮರೆಯಬೇಕಿದೆ...
ನಾಳಿನ ಬದುಕಿಗೊಂದು ಹೊಸ ಅರುಣೋದಯದ ನಿರೀಕ್ಷೆಯಿದೆ..

===========================================
ತಾಜ್ ಮಹಲ್ ಕಟ್ಟೋಕೆ ನಾನೇನ್ ಷಾಜಹಾನ್ ಅಲ್ಲ..
ಪ್ಯಾಲೇಸ್ ಕಟ್ಟೋಕೆ ನಾನ್ ಯಾವ್ ರಾಜನ್ ಮೊಮ್ಮಗಾನೂ ಅಲ್ಲ....
ಸತ್ ಮೇಲೆ ಸಮಾಧಿ ಕಟ್ಟೋವಷ್ಟು ಮೂರ್ಖಾನು ನಾನಲ್ಲ....
ಮನಸಲ್ಲೇ ಬೇಕಾದ್ರೆ ಕಟ್ತೀನಿ ನಿಂಗೋಸ್ಕರ ಒಂದು ಪುಟ್ಟ ಅರಮನೇನಾ..
ಬಲಗಾಲೇ ಇಟ್ಟು ಒಳಗ್ ಬಾ ಅಂತ ನಾನೇನ್ ಹೇಳಲ್ಲ..
ಎರಡೂ ಕಾಲೆತ್ತಿ ಜಂಪ್ ಮಾಡ್ಕೊಂಡ್ ಬಂದ್ರೂನು ಏನ್ ಪರವಾಗಿಲ್ಲ..
ನಿಂಗೋಸ್ಕರ ಕಾಯ್ತೀನಿ ಬೇಕಾದ್ರೆ ಎಷ್ಟೇ ವರುಷ...
ನೀ ನಿಜ್ವಾಗ್ಲು ತರೋದಾದ್ರೆ ಈ ನನ್ ಬಾಳಲ್ಲಿ ಹರುಷ...

=========================================
ಒಂದೇ ಸಮನೆ ಸುಳಿದಾಡಿವೆ ನೆನಪುಗಳು ಈ ಮನದಲ್ಲಿ..
ನಿನ್ನ ಹೊರತು ನನಗೇನಿದೆ ಈ ಜಗದಲ್ಲಿ..
ಹೊತ್ತು ಕಳೆದರೂ ಮತ್ತದೇ ನೆನಪುಗಳ ಹಾವಳಿ..
ನಿನ್ನ ಬಿಟ್ಟು ನಾ ಹೇಗೆ ಬಾಳಲಿ...

=========================================
ಕಟ್ಟಬೇಕಿದೆ ಸ್ನೇಹದ ತಾಜ್ ಒಂದು...
ಅಲ್ಲಿ, ಗೆಳೆತನದ ಗುಡಿ ಕಟ್ಟಿ-
ಹಚ್ಚಬೇಕಿದೆ ಎಂದಿಗೂ ಆರದ ನಂದಾದೀಪವೊಂದು...

========================================= 

Haleya barahagalu... (4)

ಕಾದು ಕಾದು ಕಾಯುತ್ತಲೇ ಇರುವೆ..
ಎಂದು ಬಂದು ನೀ ನನ ಸೇರುವೆ..
ಮನದಂಗಳದಲ್ಲಿ ಹೂವ ಮೆತ್ತೆಯ ಹಾಸಿರುವೆ..
ನಿನ್ನೊಂದು ಭೇಟಿಗಾಗಿ ನಾ ಎದುರು ನೋಡುತ್ತಿರುವೆ..
ನಿನಗಾಗಿ ನಾ ಕಾದಿರುವೆ......
ಕಾಯುತ್ತಲೇ ಇರುವೆ......

============================================
 
ನಿನಗಾಗಿ-ಅಬ್ಬರಿಸಿ ಬೊಬ್ಬಿರಿಯಲಿಲ್ಲ..
ಎದುರಾದಾಗ ತಬ್ಬಿಬ್ಬಾಗಲಿಲ್ಲ...
ನಿದಿರೆಯಲ್ಲೂ ಕನವರಿಸಿದೆನಲ್ಲಾ...
ಕದ್ದು ಮಾತಾಡುವ ಆಸೆಯಿದೆಯಲ್ಲಾ...
ಕಳ್ಳ ನೋಟಕೆ ಮನ ಸೋತಿದೆಯೆಲ್ಲ..
ನೀ ಬರಲಾರೆಯೆಂಬುದು ನನಗೂ ಗೊತ್ತಿದೆಯಲ್ಲ...
ಆದರೂ ಈ ಹುಚ್ಚು ಆಸೆಗಳಿಗೆಲ್ಲ ಎಂದಿಗೂ ಕೊನೆಯಿಲ್ಲ....

===========================================
ಎಲ್ಲಿಂದಲೋ ಬೀಸುವ ತಂಗಾಳಿ..
ಎಲ್ಲಿಂದಲೋ ಸುರಿಯುವ ಸೋನೆ ಮಳೆ..
ಎಲ್ಲೋ ಮರದ ಮರೆಯಲ್ಲಿ ಕುಳಿತು ಹಾಡುವ ಕೋಗಿಲೆ..
ಎಲ್ಲೋ ಹುಟ್ಟಿ ಎಲ್ಲೋ ಹರಿದು ಎಲ್ಲೋ ಸೇರುವ ನದಿ..
ಎಲ್ಲಿಂದಲೋ ಧುಮ್ಮಿಕ್ಕುವ ಜಲಪಾತ..
ಎಲ್ಲಿಂದಲೋ ತೇಲಿ ಬರುವ ಮಧುರ ಸಂಗೀತದ ಆಲಾಪನೆ..
ಎಲ್ಲೋ ಶುರುವಾಗುವ ಬದುಕಿನ ಪಯಣ..
ಎಲ್ಲೋ ಯಾರೋ ಜೊತೆಯಾಗುವರು ಬೇಕಿಲ್ಲಾ ಯಾವುದೇ ಕಾರಣ..

===========================================
ತಕ್ಕಡಿಯಲ್ಲಿ ಹಾಕಿ ತೂಗಬೇಕಿದೆ..
ಬದುಕಲ್ಲಿ--
ಪಡೆದುಕೊಂಡದ್ದು ಹೆಚ್ಚೋ..
ಕಳೆದುಕೊಂಡದ್ದು ಹೆಚ್ಚೋ..
ಬಹುಶಃ--
ಕಳಕೊಂಡಿದ್ದರಲ್ಲಿ ಪಡೆದುಕೊಂಡಿದ್ದೆ ಹೆಚ್ಚು..
ಪಡೆದುಕೊಂಡಿದ್ದರಲ್ಲಿ ಕಳಕೊಂಡಿದ್ದೆ ಹೆಚ್ಚು.. ಆದರೂ--
ಕಳಕೊಂಡಿದ್ದನ್ನ ಮರಳಿ ಪಡೆಯಲಾಗೋಲ್ಲ..
ಪಡೆದುಕೊಂಡಿದ್ದನ್ನ ಮರಳಿ ಕಳೆದುಕೊಳ್ಳಲು ಮನಸಿಲ್ಲ....
 

Haleya barahagalu ... (3)


ದೂರದ ಚಂದ್ರನಿಗೇನು ಗೊತ್ತು..
ವಿಶಾಲ ಸಾಗರದ ಮೊರೆತ..
ಭೋರ್ಗರೆವ ಅಲೆಗಳಿಗೇನು ಗೊತ್ತು..
ಹುಣ್ಣಿಮೆಯ ಚಂದ್ರನ ಮಿಡಿತ..
=======================================
ನಿನ್ನುತ್ತರಕ್ಕಾಗಿ ಕಾಯಲೇ ಇಲ್ಲ.
ಕಾರಣ - ಪ್ರೀತಿ ಒಂದು ಪ್ರಶ್ನೆ ಅಲ್ಲ...
ಮರಳಿ ಏನನ್ನು ಬಯಸಲೇ ಇಲ್ಲ.
ಕಾರಣ - ಪ್ರೀತಿ ವ್ಯವಹಾರವಲ್ಲ...
ಪ್ರೀತಿ ಬಯಸಿದ್ದು ಕೇವಲ ಮರು ಪ್ರೀತಿಯ.
ಕಾರಣ - ಪ್ರೀತ್ಸೋರಿಗೂ ಒಂದು ಮನಸಿದೆಯಲ್ಲ..

=======================================
ನೆನಪೊಂದೆ ನೆಪಮಾಡಿ..
ನೆನಪಲ್ಲೇ ಮನೆಮಾಡಿ..
ನನಸಾಗಲೆಂದೆ ಕಾಯುವೆ...
ಕನಸೆಲ್ಲಾ ಕಸಿ ಮಾಡಿ..
ಮನಸೆಲ್ಲಾ ಹದ ಮಾಡಿ..
ಉಸಿರಾಗಲೆಂದೆ ಬೇಡುವೆ...
ಈ ಪ್ರೀತಿ ನವಿರಾಗಿ..
ನಾ ನಿನ್ನ ಅನುರಾಗಿ..
ಜೊತೆಯಾಗಿ ಎಂದು ನಾನಿರುವೆ...
ನೀ ನನ್ನ ಜೊತೆಯಾಗಿ..
ಈ ಬಾಳ ಬೆಳಕಾಗಿ..
ಬರುವೆಯೆಂದು ನಾ ಕಾದಿರುವೆ ....

========================================
ನೋವ ಸಾಗರದಲ್ಲಿ ಮಿಂದು ಮುಳುಗೆದ್ದ ಮನಸ್ಸಿಂದು ,
ಮೌನ ಸಾಗರದ ಮೊರೆಹೊಕ್ಕಿದೆ..
ಮತ್ತೆಂದೂ ನೂಕದಿರು ಮರಳಿ ಸಾಗರಕೆ,
ಈಜಿ ದಡ ಸೇರಲು ಮನದ ಕೈ ಸೋತು ಮರಗಟ್ಟಿದೆ..

======================================== 

Haleya barahagalu ... (2)

ಮೌನರಾಗ::
ಪ್ರೀತಿ ಸತ್ತಿದೆ.
ಭೀತಿ ಹೆಚ್ಚಿದೆ.
ಹೃದಯ ಹಾಡಿದೆ.
ಮೌನರಾಗ...

ಕಾಲ ಸವೆದಿದೆ.
ದೇಹ ಬಳಲಿದೆ.
ಹೃದಯ ಹಾಡಿದೆ.
ಮೌನರಾಗ...
ಸಂಬಂಧ ಹಳಸಿದೆ.
ಬಂಧನ ಕಳೆದಿದೆ.
ಹೃದಯ ಹಾಡಿದೆ.
ಮೌನರಾಗ...
ಮನಸು ಮರುಗಿದೆ.
ಕನಸು ಕರಗಿದೆ.
ಹೃದಯ ಹಾಡಿದೆ.
ಮೌನರಾಗ...
ಸತ್ಯ...,

Haleya barahagalu... (1)

ಬದುಕಲ್ಲಿ ಏನೇನೋ ಅನ್ಕೋತೀವಿ...
ಚಿಕ್ಕವರಿದ್ದಾಗ ದೊಡ್ಡೊರಾದಮೇಲೆ ಡಾಕ್ಟ್ರ್ ಆಗಬೇಕು, ಇಂಜಿನಿಯರ್ ಆಗ್ಬೇಕು, ಟೀಚರ್ ಆಗ್ಬೇಕು etc ಅಂತ ಅನ್ಕೊಂಡಿದ್ವಿ, ಆದ್ರೆ ಬೆಳೀತ ಬೆಳೀತ ನಮ್ ಆಸೆಗಳು ,ಕನಸುಗಳೆಲ್ಲಾ ಬದಲಾಗ್ತಾ ಬಂದ್ವು. ಯಾರ್ನೋ ಒಬ್ರನ್ನ ನಮ್ ಜೀವನದ ರೋಲ್ ಮಾಡೆಲ್ ಆಗಿ ಸ್ವೀಕರಿಸಿಕೊಂಡ್ವಿ . ಅವ್ರತರಾನೆ ನಾವು ಆಗ್ಬೇಕು ಅನ್ನೋ ಹುಚ್ಚು. ಆದ್ರೆ ಬದುಕಿನ ಕಟ್ಟುಪಾಡುಗಳ್ಗೆ ತಗಲಾಕ್ಕೊಂಡ ನಮ್ ಲೈಫ್ ನಲ್ಲಿ ನಾವ್ ಅಂದುಕೊಂಡಿದ್ನ ಮಾಡಿದ್ಕಿಂತ ಬೇರೆಯವರು ಅಂದುಕೊಂಡಿದ್ನೆ ಮಾಡಿದ್ದು ಹೆಚ್ಚು.ಪೋಷಕರ ಆಸೆ ಈಡೇರಿಸಕ್ಕೊ, ಸಂಬಂಧಿಕರ ಮಧ್ಯೆ ನಾವು ಕಮ್ಮಿ ಇಲ್ಲ ಅಂತ ತೋರಿಸಿಕೊಳ್ಳೊದಕ್ಕೊ, ಒಟ್ನಲ್ಲಿ ನಮ್ ಆಸೆನೆಲ್ಲಾ ಗಂಟು ಕಟ್ಟಿ ಮೂಲೆಗೆ ಹಾಕಿಬಿಟ್ವಿ.
ಹೋಗ್ಲಿ ಕೆಲ್ಸ ಸಿಕ್ತು ,ಜೀವನ ಒಂದು ಕಡೆ ಸೆಟಲ್ ಆಯ್ತು ಇನ್ನಾದ್ರು ನಾವ್ ಅಂದುಕೊಂಡಿದ್ದ , ಖಾಲಿ ಬಿದ್ದ ಕನಸುಗಳನ್ನೆಲ್ಲಾ ಒಟ್ಟಾಕಿ ನನಸು ಮಾಡೊ ಮನಸು ಬಂದ್ರು ಕೂಡ , ಎಲ್ಲೊ ಒಂದ್ ಕಡೆ ಸೋಮಾರಿತನ, ಜಿಜ್ಞಾಸೆ , ನಿರಾಶಾಭಾವ , ಇಷ್ಟ್ ದಿನ ಮಾಡದೆ ಇರೊದ್ನ ಈಗ ಮಾಡಿ ಏನು ಪ್ರಯೋಜನ ಅನ್ನೊ ಅಸಡ್ಡೆ ಭಾವನೆ...
ಒಟ್ನಲ್ಲಿ ಹೇಳ್ಬೇಕು ಅಂದ್ರೆ ಜೀವನ ಅನ್ನೋದು ಅರ್ಥ ಮಾಡಿಕೊಳ್ಳೋಕೆ ಆಗದೆ ಇರೊ ಒಂದು ನಾಟಕ..

ನೀವೆನಂತೀರ...??!!!