Sunday 2 February 2014

Sanna kathe ...1

ಅವಳೇ ...

ಎಲ್ಲೋ ನೋಡಿದ ನೆನಪು ಅಂತ ಮನಸ್ಸು ಹೇಳುತ್ತಿತ್ತು. ಹೌದು ಸರಿಯಾಗಿ ನೆನಪಿಸಿಕೊಂಡರೆ ಅವಳೇ. ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದೆವು. ಆದರೆ ವಿಭಾಗ ಮಾತ್ರ ಬೇರೆ ಬೇರೆ. ನೋಡೋಕೆ  ಅಷ್ಟೇನು ಸುಂದರಿ ಅಲ್ಲದಿದ್ದರೂ ಯಾರಾದರೂ ಇಷ್ಟ ಪಡುವಂತಹ ಮುಖ. ಅದಕ್ಕೆ ಏನೋ ನಾನು ಇಷ್ಟ ಪಟ್ಟಿದ್ದು. ಹುಚ್ಚು ಪ್ರೀತಿಯಲ್ಲದಿದ್ದರೂ ಪ್ರೀತಿಯಂತು ಆಗಿತ್ತು. ದಿನ ಅವಳಿಗಾಗಿ ಅವಳ ದಾರಿಗಾಗಿ ಕಾಯುತ್ತ ಇರುತ್ತಿದ್ದೆ . ಯಾರಲ್ಲೂ ಹೇಳದಿದ್ದರೂ ನನ್ನೊಳಗಿನ ಮನಸ್ಸಿಗೆ ಅದು ಅರ್ಥವಾಗಿತ್ತು.
ಹೆಚ್ಚಾಗಿ ಫ್ಯಾಷನ್ ಮಾಡದ ಅವಳು ಕೇವಲ ಚೂಡಿದರ್ ನಲ್ಲಿ ಬರುತಿದ್ದರೂ ಚೆಂದವಾಗಿದ್ದಳು.

ದಿನ ಅವಳ ಕ್ಲಾಸ್ ರೂಂ ಹತ್ತಿರ ವಿನಾಕಾರಣ ಸುತ್ತು ಬರುತ್ತಿದ್ದೆ. ಅವಳು ನನ್ನೇ ನೋಡುತ್ತಿದ್ದಾಳೆ ಎಂದು ಅರಿವಿದ್ದರೂ ನೇರವಾಗೇ ನೋಡುತ್ತಿದ್ದೆ. ಆದರೆ ಅವ್ಳು ಮಾತ್ರ ಯಾರೋ ದಾರಿಹೋಕರನ್ನು ನೋಡಿದ ಹಾಗೆ ನೋಡಿ ಹಾಗೆ ಮುಂದೆ ಹೋಗುತ್ತಿದ್ದಳು. ನಾನು ಹೆಚ್ಚು ಮುಂದುವರಿಯುವ ಪ್ರಯತ್ನವನ್ನೂ ಮಾಡಲಿಲ್ಲ. ಯಾರಿಗೂ ತಿಳಿಯದ ನನ್ನೊಳಗಿನ ತುಮುಲ ನನ್ನಲ್ಲೇ ಉಳಿದು ಹೋಗಿತ್ತು. ಭವಿಷ್ಯದ ಕನಸುಗಳನ್ನು ಹೊತ್ತ ನಾನು ಬೇರೆ ವಿಷಯಕ್ಕೆಲ್ಲಾ ಗಮನ ಕೊಡಬಾರದೆಂದುಕೊಂಡಿದ್ದರೂ ಅವಳೂ ಮಾತ್ರ ನನ್ನ ಮನಸ್ಸನ್ನು ಹೊಕ್ಕಿಯಾಗಿದ್ದಳು. ಅಷ್ಟರಲ್ಲಾಗಲೇ ಕಾಲೇಜ್ ಲೈಫ್ ನ ಎರಡು ವರ್ಷ ಮುಗಿದಿತ್ತು. ಮುಂದಿನ ಜೀವನದ ಕಡೆಗೆ ಗಮನವೂ ಹರಿದಿತ್ತು.

ಜೀವನ - ಪ್ರೀತಿ ಎರಡರ ನಡುವಿನ ಆಯ್ಕೆಯಲ್ಲಿ ನಾ ಜೀವನವನ್ನೇ ಆರಿಸಿಕೊಂಡಿದ್ದೆ. ಅವಳಿಗೆ ಹೇಳದಿದ್ದರೂ ನನ್ನೊಳಗಿನ ಪ್ರೀತಿ ಮಾತ್ರ ಸ್ವಲ್ಪವೂ ಕಡಿಮೆಯಾಗಿರಲಿಲ್ಲ. ಆಗಲಿಕ್ಕೆ ಕಾರಣಗಳು ಇರಲಿಲ್ಲ. ಅಷ್ಟರಲ್ಲಾಗಲೇ ಅವಳಿಗೆ ಯಾರೋ ಜೊತೆ ಇದ್ದಾರೆ ಅನ್ನೋ ವಿಚಾರಗಳು ಕಿವಿಯ ಸೇರಿತ್ತು. ನಾನೇನು ಅವಳನ್ನ ಪಡಿಯಬೇಕು ಅನ್ನೋ ಹಂಬಲ ಹೊಂದಿಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಮನಸ್ಸು ಕದಡಿತ್ತು. ಹೇಗೋ ದಿನಗಳು ಉರುಳುತಿತ್ತು, ನಾಳೆಗಳು ಬರುತಿತ್ತು, ನೆನಪುಗಳು ಕಾಡುತ್ತಿತ್ತು , ಕಣ್ಣಲ್ಲಿ ಜೀವನ ಕಟ್ಟಿಕೊಳ್ಳುವ ಕನಸುಗಳು, ಮನಸ್ಸಲ್ಲಿ ಅವಳನ್ನು ಕಳೆದುಕೊಳ್ಳುವ ನಿರಾಸೆ.

ಇವೆಲ್ಲಾ ಆಸೆ ನಿರಾಸೆಗಳ ನಡುವೆಯೇ ಕಾಲೇಜು ಜೀವನ ಮುಗಿದಿತ್ತು. ಕೊನೆಗೂ ಅವಳ ಹತ್ತಿರ ಮಾತನಾಡಲಾಗಲಿ, ನನ್ನ ಪ್ರೀತಿಯ ನಿವೇದಿಸಿಕೊಳ್ಳಲಾಗಲಿ ಆಗಲಿಲ್ಲ ಅಥವಾ ನಾ ಹೋಗಲಿಲ್ಲ. ಜೀವನದ ಬೆನ್ನ ಹಿಂದೆ ಓಡುತ್ತಿದ್ದ ನನಗೆ ಅವಳ ನೆನಪೇ ಮರೆತೋಯ್ತು. ಈಗ ಅವಳೇ ಎದುರುಗಡೆ ನಿಂತಂತಿದೆ. ಅವಳೇನ ಎಂದು ಕೇಳಲು ಅವಳ ಹೆಸರಾದರೂ ನೆನಪಿದೆಯಾ, ಇಲ್ಲಾ.. ನಾನವಳ ಹೆಸರನ್ನೇ ತಿಳಿದುಕೊಂಡಿರಲಿಲ್ಲ. ಅವಳ ಬಗ್ಗೆ ಯಾರ ಹತ್ರಾನೂ ಕೇಳಿರಲಿಲ್ಲ. ಈಗ ಏನು ಮಾಡುವುದು ಎಂಬ ಪ್ರಶ್ನೆಗೆ ಉತ್ತರವ ಹುಡುಕುತ್ತಿದ್ದಾಗಲೇ ಯಾರೋ ಬಂದು ಅವಳನ್ನ ಬೈಕ್ ನ ಮೇಲೆ ಕರೆದುಕೊಂಡು ಹೊರಟೇ ಹೋದರು. ಅವರೇನು ಅವಳ ಅಣ್ಣನೋ ತಮ್ಮನೋ ಇಲ್ಲಾ......... !!!!
ಅಂತು ಮತ್ತೊಮ್ಮೆ ಎದುರಿಗೇ ಬಂದ ಪ್ರೀತಿಯನ್ನು ಹೇಳದೆ ಹೋಗಿದ್ದೆ.....

ಸತ್ಯ..,
(ಇದು ಕೇವಲ ಕಲ್ಪನೆಯ ಕಥೆ)

No comments:

Post a Comment