Monday 17 February 2014

"ಕಾಲ ಮತ್ತು ಕನಸು" ನನ್ನ ಮಾತುಗಳಲ್ಲಿ...,



                         ಕಾಲ ಅನ್ನೋದು ಎಷ್ಟು ವಿಚಿತ್ರ ಅಲ್ವಾ. ಅದಕ್ಕೇ ಕಾಲವನ್ನು ತಡೆಯೋರು ಯಾರು ಇಲ್ಲ- ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ ಅನ್ನೋ ಹಾಡೇ ಸಾಕ್ಷಿ. ಹೌದು ನಾವು ಸುಮ್ನೆ ಕೂತರೂ, ಗಡಿಯಾರದ ಮುಳ್ಳು ತಿರುಗೋದು ನಿಂತರೂ ಸಮಯ ಮಾತ್ರ ಲಗಾಮಿಲ್ಲದ ಕುದುರೆಯಂತೆ ಓಡುತ್ತಲೇ ಇರುತ್ತದೆ. ನಾವು ಬೇಕಾದರೆ ನಮ್ಮ ಕೆಲಸವನ್ನು ನಾಳೆಗೆ ಮುಂದೂಡಬಹುದು ಆದರೆ ತಿರುಗೋ ಭೂಮಿ, ಭಾನು ಮಾತ್ರ ನಿತ್ಯ ನಿರಂತರ ತನ್ನ ಕಾಯಕವನ್ನು ಮಾಡುತ್ತಲೇ ಇರುತ್ತದೆ.

ಈ- ಕಾಲಕ್ಕೂ , ಕನಸಿಗೂ ಏನೋ ನಂಟು ಇದೆ ಅಂತ ಅನ್ಸಲ್ವಾ..!! . ನಾಳೆ ಏನು ಅಂತ ಗೊತ್ತಿಲ್ಲಾ ಅಂದ್ರು ಕನಸುಗಳನ್ನ  ಕಾಣೋದು ಮಾತ್ರ ನಿಲ್ಲಿಸೋಕೆ ಆಗಲ್ಲ ಅಲ್ವಾ..?!! ನಾವೇ ಈ ಭೂಮಿ ಮೇಲೆ ಹುಟ್ಟುತ್ತೀವಿ ಅಂತ ಯಾರಿಗೂ ಗೊತ್ತಿರಲ್ಲ. ಯಾರ್ ಹೊಟ್ಟೇಲಿ ಹುಟ್ಟುತ್ತೀವಿ ಅಂತಾನು ಗೊತ್ತಿರಲ್ಲ. ಯಾವಾಗ ಸಾಯ್ತಿವಿ ಅಂತಾನು ಗೊತ್ತಾಗಲ್ಲ. ಆದರೆ ಹುಟ್ಟಿ ಬೆಳಿತಾ ಬೆಳಿತಾ ಹೋದಂಗೆಲ್ಲ ಈ ಕಾಲದ ಜೊತೆ ಕನಸುಗಳು ಬೆಳಿತಾ ಹೋಗುತ್ತದೆ. ಸಣ್ಣವರಿದ್ದಾಗ ಯಾರೋ ಹಿಡ್ಕಂಡಿರೋ ತಿಂಡಿನೋ , ಆಟದ ಸಾಮಾನುಗಳು ನಮ್ಮತ್ರಾನು ಇದ್ರೆ...!! ಅನ್ನೋ ಕನಸು. ಮನೆಯಲ್ಲಿ ಕೊಡ್ಸೋ ಸೌಲಭ್ಯ ಇದ್ರೆ ಅದು ಒಂದು ಆಸೆ ಅಷ್ಟೇ. ಅದೇ ಕೊಡ್ಸೋಕೆ ಆಗಲ್ಲಾ ಅಂದ್ರೆ ಅದೂ ಕೂಡ ಒಂದು ಕನಸೇ ಅಂತ ಹೇಳಬಹುದು.

ಇನ್ನು ಶಾಲೆ ಮೆಟ್ಟಿಲು ಹತ್ತಿದ ಮೇಲೆ ಸ್ನೇಹಿತರು ಹಾಕೋ ತರ ಬಟ್ಟೆ ಹಾಕೋಬೇಕು, ಅದೇ ತರದ ಬ್ಯಾಗ್ ಬೇಕು, ಶೂಸ್ ಬೇಕು, ಬುಕ್ ಬೇಕು, ಎಕ್ಸ್ಟ್ರಾ ಕ್ಲಾಸ್ ಗೆ ಸೇರ್ಕೊಬೇಕು, ಸೈಕಲ್ ಬೇಕು ಇನ್ನೂ ಏನೇನೋ
ಮುಗಿಯದ ಬಯಕೆಗಳು. ಎಷ್ಟೋ ಜನರ ಜೀವನದಲ್ಲಿ ಇವೆಲ್ಲಾ ಇನ್ನು ಕನಸುಗಳಾಗೆ ಉಳಿದಿವೆ. ಎಷ್ಟೋ ಅಪ್ಪ ಅಮ್ಮಂದಿರು ತಮ್ಮ ಕನಸುಗಳು ನನಸಾಗದಿದ್ದರೂ ತಮ್ಮ ಮಕ್ಕಳ ಕನಸಾದರೂ ನನಸಾಗಲಿ ಅಂತ ಹಗಲಿರುಳು ದುಡಿಯೋದು ಅದಕ್ಕೆ ಅಲ್ವೇ..!! ಎಷ್ಟೇ ಇದ್ರು ಆಸೆಗಳಿಗೇನು ಬರವೇ..?? ಒಂದು ಕೊಡ್ಸಿದ್ರೆ ಮತ್ತೊಂದು ಬೇಕು ಅನ್ನೋದಂತು ಯಾರೂ ಬಿಡಲ್ಲ. ಅದು ಸಿಗ್ಲಿಲ್ಲ ಅಂದಾಗ ಅದು ಕೂಡ ಈಡೇರದ ಕನಸುಗಳ ಗುಂಪಿಗೆ ಸೇರ್ಪಡೆ.

ನಿಜವಾದ ಕನಸುಗಳ ಕಟ್ಟೆ ಒಡೆಯುವುದು ಈಗಲೇ. ಅದೇ ಕಾಲೇಜ್ ಮೆಟ್ಟಿಲು ಏರಿದಾಗ. ಅಲ್ಲಿವರೆಗೂ ಇರದ ಜವಾಬ್ದಾರಿ ಈಗ ತನ್ನಿಂದ ತಾನೇ ಬರುತ್ತದೆ. ಪ್ರತಿಯೊಬ್ಬರೂ ಕನಸುಗಳ ಅರಮನೆ ಕಟ್ಟೋದೇ ಈಗ.
ಮುಂದೆ ಏನು ಓದಬೇಕು, ಏನೆಲ್ಲಾ ಸಾಧನೆ ಮಾಡಬೇಕು, ಫ್ಯಾಮಿಲಿ ನ ಹೇಗೆ ನೋಡ್ಕೋಬೇಕು, ಮನೆ ಕಟ್ಬೇಕು, ಹೆಸರು ಮಾಡಬೇಕು, ಹೆಚ್ಚು ಹೆಚ್ಚು ದುಡ್ಡು ಸಂಪಾದನೆ ಮಾಡಬೇಕು.etc.....
ಇನ್ನು ಪ್ರೀತಿ ಪ್ರೇಮ ಅನ್ನೋದು ಶುರುವಾದರಂತೂ ಕೇಳೋದೇ ಬೇಡ. ಸ್ವರ್ಗವನ್ನೇ ಭೂಮಿಗೆ ತಂದಿಟ್ಟು ಬಿಡ್ತಾರೆ. ಹೆಚ್ಚಿನವರು ಕ್ಷಣಿಕದ ಸ್ವರ್ಗದ ಆಸೆಯಿಂದಾಗಿ .ಭವಿಷ್ಯದ ಕನಸನ್ನೆಲ್ಲಾ ಹಾಳು ಮಾಡ್ಕೊಂಡಿರೋದನ್ನ ನೋಡೇ ಇರ್ತೀವಿ . ಆ ವಿಚಾರ ಆ ಕಡೆ ಇರಲಿ ಬಿಡಿ.

ಇನ್ನು ಕಾಲೇಜ್ ಲೈಫ್ ಎಂಬ ಸಣ್ಣ ಅವಧಿಯ ಕಾಲ ಹೇಗೆ ಮುಗ್ದು ಹೋಗತ್ತೋ ಆ ದೇವರೇ ಬಲ್ಲ. ಎಲ್ಲರಿಗೂ ಇದರ ಅನುಭವ ಅಂತು ಇದ್ದೇ ಇದೆ..!! ಏನು ಎತ್ತ ಅನ್ನುವಾಗಲೇ ಜೀವನವೆಂಬ ಮಹಾಸಾಗರಕ್ಕೆ ಎಂಟ್ರಿ ಕೊಟ್ಟಿರ್ತೀವಿ. ಹೆಚ್ಚಿನ ಹುಡುಗಿಯರು ಮದುವೆ (ಎಂಬ ಅತ್ಯಾಚಾರ) ಮಾಡ್ಕೊಂಡು ಕಂಡ ಕನಸುಗಳನ್ನೆಲ್ಲಾ ಅಗ್ನಿ ಕುಂಡದ ಸುತ್ತ ಸುತ್ತುತ್ತಾ ಸುಟ್ಟು ಬಿಡ್ತಾರೆ. (ಈಗ ಕಾಲ ಬದಲಾಗಿದೆ -ಮದ್ವೆ ಆದಮೇಲೂ ನಾರ್ಮಲ್ ಲೈಫ್ ನಡ್ಸೋರು ಇದಾರೆ). ಇನ್ನು ಹುಡುಗ್ರು ಫ್ಯಾಮಿಲಿ , ರೆಸ್ಪಾನ್ಸಿಬಿಲಿಟಿ , ಅನಿವಾರ್ಯತೆಯ ಕಟ್ಟುಪಾಡಿಗೆ ಒಳಗಾಗಿ, ಕನಸುಗಳನ್ನೆಲ್ಲಾ ಮೂಟೆ ಕಟ್ಟಿ ,ಹಣ ಗಳಿಸುವುದೊಂದೇ ತಮ್ಮ ಕನಸನ್ನಾಗಿ ಮಾಡಿಕೊಂಡು ಬಿಡ್ತಾರೆ (ಒಂದೊಂದ್ಸಲ ಕಾಲಾನೆ ಈ ರೀತಿ ಬದಲಾಯಿಸಿ ಬಿಡುತ್ತದೆ).

ಇವೆಲ್ಲದರ ನಡುವೆ ಕೆಲವು ಮರೆಯಲಾಗದ ಕನಸುಗಳು ಎಲ್ಲರ ಮನಸಲ್ಲೂ ಇರುತ್ತದೆ. ಈಗ ಅವಕಾಶ ಸಿಕ್ಕರೂ ಅದನ್ನ ನನಸಾಗಿಸಲು ತುದಿಗಾಲಲ್ಲಿ ನಿಂತಿರ್ತಾರೆ. ಎಲ್ಲೋ ವೇದಿಕೆ ಮೇಲೆ ಹಾಡೋ ಆಸೇನೋ, ನಾಲ್ಕು ಜನರ ಮುಂದೆ ಕುಣಿಯೋ ಹುಚ್ಚೋ, ಸಿನಿಮಾದಲ್ಲಿ ನಟಿಸುವ ಆಸೇನೋ, ನೆಚ್ಚಿನ ನಟ ನಟಿ , ಕ್ರೀಡಾಪಟುವಿನ ಜೊತೆ ಡಿನ್ನರ್ ಆಸೇನೋ, ಅವರನ್ನ ವರಿಸುವ ಆಸೇನೋ, ಯಾವುದೊ ಹುಡುಗ ಹುಡ್ಗಿನ ಮನಸಾರೆ ಮೆಚ್ಚಿಕೊಂಡು ಈಗಲೂ ಅವರಿಗಾಗಿ ಬಯಸುವ ಮನ, ಹೇಗೆ ಇನ್ನೂ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದ್ರೆ ಅವೆಲ್ಲಾ ನನಸಾಗೋದಿಲ್ಲ ಅಂತ ಗೊತ್ತಿದ್ದರೂ ಕನಸುಗಳು ಮಾತ್ರ ಜೀವಂತ......

ಅಲ್ವಾ...??!!!

No comments:

Post a Comment